ಬುಲ್ಲಿ ಬಾಯಿ ಆ್ಯಪ್ ಪ್ರಕರಣ: ಆರೋಪಿ ನೀರಜ್ ಅಶ್ಲೀಲ ಸಿನಿಮಾಗಳ ವ್ಯಸನಿ; ವರದಿ

ಹೊಸದಿಲ್ಲಿ: ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಇಂಜಿನಿಯರಿಂಗ್ ವಿದ್ಯಾರ್ಥಿ, 20 ವರ್ಷದ ನೀರಜ್ ಬಿಷ್ಣೋಯಿಯ ಲ್ಯಾಪ್‍ಟಾಪ್‍ನಲ್ಲಿ 153 ಅಶ್ಲೀಲ ಸಿನೆಮಾಗಳ ಡೌನ್‍ಲೋಡ್‍ಗಳಿದ್ದವಲ್ಲದೆ ಹಲವಾರು ಕೆಟ್ಟ, ಲೈಂಗಿಕ ವಿಚಾರಗಳ ಕಂಟೆಂಟ್ ಕೂಡ ಇತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತ ಪೋರ್ನ್ ವ್ಯಸನಿಯಾಗಿದ್ದ ಹಾಗೂ ತನಗಿಂತ ಹಿರಿಯ ಮುಸ್ಲಿಂ ಮಹಿಳೆಯರತ್ತ ಅಸಹಜವಾಗಿ ಆಸಕ್ತಿ ಹೊಂದಿರುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ. ಆದರೆ ಇದು ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರವೂ ಹೌದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲತಃ ರಾಜಸ್ಥಾನದವನಾಗಿರುವ ಆತನನ್ನು ಅಸ್ಸಾಂನ ಜೋರ್ಹಟ್‍ನಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿತ್ತು. ಆತ 16 ವರ್ಷದವನಿರುವಾಗಲೇ ಆತನ ಸೋದರಿಗೆ ಶಾಲೆಯೊಂದರಲ್ಲಿ ಪ್ರವೇಶಾತಿ ದೊರಕಿಲ್ಲ ಎಂಬ ಸಿಟ್ಟಿನಿಂದ ಶಾಲೆಯ ವೆಬ್ ಸೈಟ್ ಹ್ಯಾಕ್ ಮಾಡಿದ್ದ ಎಂದು ವರದಿ ತಿಳಿಸಿದೆ.
ಆತನ ಲ್ಯಾಪ್‍ಟಾಪ್‍ನಿಂದ ಬುಲ್ಲಿ ಬಾಯಿ ಆ್ಯಪ್‍ನ ಕೋಡ್ ಸ್ಕ್ರಿಪ್ಟ್ ವಶಪಡಿಸಿಕೊಳ್ಳಲಾಗಿದೆ ಹಾಗೂ ಆತನ ಲ್ಯಾಪ್‍ಟಾಪ್‍ನಲ್ಲಿ ಗೇಮ್ಸ್ ಮತ್ತು ಪೋರ್ನ್ ವಿಷಯಗಳೇ ತುಂಬಿದ್ದವು ಎಂದು ಮೂಲಗಳು ತಿಳಿಸಿವೆ. ಆತ ಹೆಚ್ಚಾಗಿ ಒಬ್ಬಂಟಿಯಾಗಿರುತ್ತಿದ್ದ ಎಂದು ಆತನಿಗೆ ಹತ್ತಿರದ ಮೂಲಗಳು ತಿಳಿಸಿವೆ.
ಬಂಧನಕ್ಕೊಳಗಾದ ನಂತರ ಹಲವು ಬಾರಿ ಆತ ಆತ್ಮಹತ್ಯೆಯ ಬೆದರಿಕೆಯೊಡ್ಡಿದ್ದ, ಕೈಗಳ ನರವನ್ನು ಬ್ಲೇಡಿನಿಂದ ಕತ್ತರಿಸುವುದಾಗಿ ಹಾಗೂ ನೇಣಿಗೆ ಶರಣಾಗುವುದಾಗಿ ಹೇಳಿದ್ದ. ಊಟ ಕೂಡ ಮಾಡದೇ ಇದ್ದುದರಿಂದ ಹೊರಗಿನಿಂದ ಆಹಾರ ತರಿಸಿ ಕೊಡಲಾಗಿತ್ತು ಎಂದು ತಿಳಿದು ಬಂದಿದೆ. ಸದಾ ಆನ್‍ಲೈನ್ ಇರುವ ಈತ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಈತನಿಗೆ ವ್ಯಸನಗಳೇನೇ ಇದ್ದರೂ, ಸಾಮಾಜಿಕ ತಾಣಗಳಲ್ಲಿ ಪ್ರಭಾವ ಬೀರುವ ಮುಸ್ಲಿಂ ಮಹಿಳೆಯರನ್ನು ಮಾತ್ರ ಗುರಿಯಾಗಿಸಿ ಆನ್ ಲೈನ್ ಹರಾಜು ಮಾಡಲು ಕಾರಣವೇನು? ಮತ್ತು ಈತನ ಹಿಂದಿರುವ ಪ್ರಭಾವಿಗಳು ಯಾರು? ಎಂದು ಪತ್ತೆಹಚ್ಚಬೇಕಾಗಿ ಸಾರ್ವಜನಿಕರು ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.







