ಕೊರೋನ ಕಾಲದ ಕಾಂಗ್ರೆಸ್ ಪಾದಯಾತ್ರೆ ಶೋಭೆ ತರಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜ.8: ಕಾಂಗ್ರೆಸ್ ರಾಜಕಾರಣ ದೃಷ್ಟಿಯಲ್ಲಿಟ್ಟುಕೊಂಡು ಮೇಕೆ ದಾಟು ಪಾದಯಾತ್ರೆ ನಡೆಸುತ್ತಿದೆ. ಕೊರೋನ ಕಾಲದ ಕಾಲ್ನಡಿಗೆ ಅವರಿಗೆ ಶೋಭೆ ತರಲ್ಲ. ರಾಜಕಾರಣದ ಚಳುವಳಿ ಜನಸಾಮಾನ್ಯರ ಚಳುವಳಿಯಾಗದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಸಂಬಂಧಿಸಿದಂತೆ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಇದೆಲ್ಲವೂ ಜನತಗೆ ಗೊತ್ತಿದೆ. ಮೇಕೆದಾಟು ಯೋಜನೆಗೆ ನಮ್ಮ ಸರಕಾರ ಪ್ರಾಧಾನ್ಯ ಕೊಟ್ಟಿರುವುದಾಗಿ ಸಿಎಂ ಹೇಳಿದ್ದಾರೆ. ನ್ಯಾಯಾಲಯದಲ್ಲಿರುವ ದಾವೆ ಬಗೆಹರಿಸಿ ಯೋಜನೆ ಅನುಷ್ಠಾನ ಮಾಡಲಾಗುವುದು. ಇಷ್ಟಾದ ಮೇಲೂ ಹೋರಾಟ ಮಾಡುವುದು ಸಮಂಜಸವಲ್ಲ ಎಂದು ತಿಳಿಸಿದರು.
ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗೆ ಪಡಿತರ ಮೂಲಕ ಕುಚ್ಚಿಗೆ ಅಕ್ಕಿ ವಿತರಣೆ ಮಾಡಲು ಕೇಂದ್ರ ಅನುಮತಿ ನೀಡಿದೆ. ಅವಳಿ ಜಿಲ್ಲೆಗಳಿಗೆ ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಬಿಡುಗಡೆಯಾಗುತ್ತದೆ. ನಾನು ಉಸ್ತುವಾರಿ ಸಚಿವನಾಗಿದ್ದಾಗ ಈ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಶಿಫಾರಸ್ಸು ಮಾಡಿದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ, ಆಹಾರ ನಿಗಮದ ಉಪಾಧ್ಯಕ್ಷ ಕೊಡ್ಗಿ ಅವರಿಗೆ ಕೃತಜ್ಞತೆ ಗಳು.
ಎಂ4, ಜಯಾ ತಳಿಯ ಅಕ್ಕಿಯನ್ನು ಖರೀದಿ ಮಾಡಿ ವಿನಿಯೋಗಿಸಲಾ ಗುವುದು. ಈಗಾಗಲೇ ಕೆಲವೆಡೆಯಿಂದ ಭತ್ತ ಖರೀದಿಯಾಗಿದೆ ಎಂದರು. ನಳಿನ್ ಕುಮಾರ್ ಕಟೀಲು ಎಳಸು ರಾಜಕಾರಣಿ ಎಂಬ ಸಿದ್ದರಾಮಯ್ಯ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಟ, ಸಿದ್ದರಾಮಯ್ಯ ಅವರ ಶಬ್ದ ಪ್ರಯೋಗದ ಹಿಂದಿನ ಭಾವನೆ ಗೊತ್ತಿಲ್ಲ. ಕಟೀಲ್ ಎಳಸುತನ ಪ್ರಾಯದ ಬಗ್ಗೆ ನನಗೆ ಹೆಮ್ಮೆಯಿದೆ. ವಯೋವೃದ್ಧರನ್ನು ರಾಜ್ಯಾಧ್ಯಕ್ಷ ಮಾಡುವ ಪರಿಪಾಠ ಇದೆ. ಸಂಘಟನೆಯ ಆಧಾರದಲ್ಲಿ ಅಧಿಕಾರ ಪಡೆದ ಯುವಕ ಕಟೀಲ್. ಕಟೀಲ್ ಅವರಿಂದ ಇಡೀ ರಾಜ್ಯಕ್ಕೆ ದ.ಕ. ಜಿಲ್ಲೆಯ ಸಂಘಟನೆಯ ಸ್ಪರ್ಶಾನುಭವ ಸಿಕ್ಕಿದೆ ಎಂದು ಹೇಳಿದರು.
ನಾನು ಒಂದು ರೂಪಾಯಿ ಖರ್ಚು ಮಾಡದೆ ಗೆದ್ದಿರುವುದು ಕಟೀಲ್ ಅವರಿಂದ. ಕಟೀಲ್ ಸಂಘಟನೆಯ ಸೂತ್ರವೇ ನನ್ನಂತಹ ಕಾರ್ಯಕರ್ತರ ಗೆಲುವಿಗೆ ಕಾರಣವಾಗಿದೆ. ಮುಂದಿನ ಚುನಾವಣೆ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎಂದು ಯಡಿಯೂರಪ್ಪ ಹಿಂದೆ ಹೇಳಿದ್ದರು. ನಳಿನ್ ಅವರ ಸಂಘಟನೆ ಸಿದ್ದರಾಮಯ್ಯಗೆ ಕಂಟಕ ಆಗಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.







