ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಐಓ ದ.ಕ. ಜಿಲ್ಲೆಯಿಂದ ಸಿಎಂಗೆ ಮನವಿ

ಮಂಗಳೂರು : ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್‌ಐಓ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಭೋದನಾ ತರಗತಿಗಳನ್ನು ತೊರೆದು ಪ್ರತಿಭಟಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ನಷ್ಟವಾಗಲಿದೆ. ಪಾಠ-ಕಲಿಕೆಯು ವಿಳಂಬವಾದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಕ್ರಮದ ಮೇಲೆ ಪ್ರಭಾವ ಬೀರುವ ಸಂಭವವಿದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅನಾನುಕೂಲವಾಗಲಿದೆ. ಅಲ್ಲದೆ ರಾಜ್ಯದ ಅನೇಕ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬನೆಯಾಗಿವೆ ಎಂದರು.
ಮನವೀಯಲ್ಲಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳದ ಜೊತೆಗೆ ಉದ್ಯೋಗ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಉಪನ್ಯಾಸಕರ ಅಳಲಿಗೆ ಸ್ಪಂದಿಸಬೇಕಾಗಿದೆ ಎಂದು ಅಗ್ರಹಿಸಲಾಗಿದೆ. ಹಾಗೆಯೇ, ಸರ್ಕಾರಿ ಕಾಲೇಜುಗಳಲ್ಲಿನ ಕಾರ್ಯಾಭಾರಕ್ಕೆ ಅನುಗುಣವಾಗಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ಹಿಂದೆಂಟು ಹಾಕುತ್ತಿರುವ ಸರ್ಕಾರ, ಕನಿಷ್ಠಪಕ್ಷ ಆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ನೆಮ್ಮದಿಯ ಜೀವನಕ್ಕೆ ಆಸರೆಯಾಗಬೇಕಿತ್ತು, ಆದಾವುದು ಆಗದಿರುವುದರಿಂದ ಉಪನ್ಯಾಸಕರು ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿದಿದ್ದಾರೆ ಎಂದೂ ವಿವರಿಸಲಾಗಿದೆ.
ಈ ಸಂದರ್ಭ ಎಸ್ ಐ ಓ ಮಂಗಳೂರು ನಗರ ಕ್ಯಾಂಪಸ್ ಕಾರ್ಯದರ್ಶಿ ರಾಝಿಕ್ ಬೆಂಗ್ರೆ, ಎಸ್ ಐ ಓ ಜಿಲ್ಲಾ ಮುಖಂಡರಾದ ಝಮೀರ್ ಪಕ್ಕಲಡ್ಕ, ಸಿನಾಫ್ ಬೆಂಗ್ರೆ, ಶಾಹಿನ್ ಬೆಂಗ್ರೆ ಉಪಸ್ಥಿತರಿದ್ದರು.







