ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ: ವಾಹನ- ಜನಸಂಚಾರ ವಿರಳ

ಬೆಂಗಳೂರು, ಜ.8: ಕೋವಿಡ್ ಮೂರನೆ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡು ರಾಜ್ಯವೇ ಸ್ತಬ್ಧಗೊಂಡಿತ್ತು.
ಬೆಂಗಳೂರು, ಕೋಲಾರ, ಬೀದರ್, ದಕ್ಷಿಣ ಕನ್ನಡ, ಮೈಸೂರು, ಹಾಸನ, ಬೆಳಗಾವಿ, ಕಲಬುರ್ಗಿ ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಬೆಳಗ್ಗೆ 6 ಗಂಟೆಯಿಂದ 10ರ ವರೆಗೆ ಮೆಡಿಕಲ್‍ಗಳು, ತರಕಾರಿ, ಹಾಲು, ದಿನಪತ್ರಿಕೆ, ದಿನಸಿ ಅಂಗಡಿ, ಬೇಕರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ತೆರೆದಿದ್ದವು.
ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. 10 ಗಂಟೆ ನಂತರ ಮೆಡಿಕಲ್‍ಗಳು ಮಾತ್ರ ತೆರೆದುಕೊಂಡಿದ್ದವು. ಉಳಿದೆಲ್ಲ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೈಗಾಡಿಗಳ ಮೇಲೆ ಸಂಚರಿಸಿ ತರಕಾರಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪೊಲೀಸರು ಮನೆಗೆ ತೆರಳುವಂತೆ ಸೂಚಿಸುತ್ತಿದ್ದ ದೃಶ್ಯವೂ ಕಂಡುಬಂದಿತು. ಬೆಂಗಳೂರು ಸೇರಿದಂತೆ ಇನ್ನಿತರೆ ನಗರದ ಭಾಗದ ಹೊರ ವಲಯದಲ್ಲಿರುವ ತರಕಾರಿ ಸಗಟು ಮಾರುಕಟ್ಟೆ ರೈತರು ಹಾಗೂ ವ್ಯಾಪಾರಿಗಳಿಂದ ಗಿಜಿಗುಡುತ್ತಿತ್ತು. 10 ಗಂಟೆಯ ನಂತರ ಇಲ್ಲಿಯ ಮಾರುಕಟ್ಟೆಯನ್ನೂ ಬಂದ್ ಮಾಡಿಸಲಾಯಿತು.
ಪೊಲೀಸರು ನಗರದಾದ್ಯಂತ ಸಂಚರಿಸಿ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿದ್ದರಿಂದ ನಗರ ಮಧ್ಯಾಹ್ನದ ವೇಳೆಗೆ ಸ್ತಬ್ಧಗೊಂಡಿತ್ತು.
ಬಸ್ ಇದ್ದರೂ, ಪ್ರಯಾಣಿಕರಿಲ್ಲ: ಬೆಂಗಳೂರಿನಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಆದರೆ, ನಗರದ ಮೆಜಿಸ್ಟಿಕ್, ಕೆಆರ್ ಮಾರುಕಟ್ಟೆ ಸೇರಿ ಇನ್ನಿತರೆ ಬಸ್ ನಿಲ್ದಾಣದಲ್ಲಿ ಹಲವು ಬಸ್‍ಗಳಿದ್ದರೂ ಪ್ರಯಾಣಿಕರೇ ಇರಲಿಲ್ಲ.
ಪೊಲೀಸ್ ತಪಾಸಣೆ: ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಪೊಲೀಸರು ವಾಹನಗಳ ತಪಾಸಣೆ ನಡೆಸಿ, ಮಾಹಿತಿ ಕಲೆಹಾಕಿದರು.ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆಯ ಮುಕ್ಕಾಲು ಭಾಗ ಬಂದ್ ಮಾಡಲಾಗಿತ್ತು. ಪ್ರತಿ ವಾಹನವನ್ನು ಪರಿಶೀಲನೆ ಬಳಿಕವೇ ಕಳುಹಿಸಲಾಯಿತು.
.jpg)
ಬೆಂಗಳೂರಿನ ಪೊಲೀಸ್ ವ್ಯಾಪ್ತಿಯ ಉತ್ತರ ವಿಭಾಗ, ಆಗ್ನೇಯ ವಿಭಾಗ, ಈಶಾನ್ಯ ವಿಭಾಗ, ದಕ್ಷಿಣ ವಿಭಾಗ, ಕೇಂದ್ರ ವಿಭಾಗ, ವೈಟ್‍ಫೀಲ್ಡ್‍ಗಳಲ್ಲೂ ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಡುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಸಂತೆ ದಿನ ಕರ್ಫ್ಯೂ : ವಿರೋಧ
ರಾಜ್ಯದಲ್ಲಿ ಕೋವಿಡ್ ಮೂರನೆ ಅಲೆ ಹಿನ್ನೆಲೆ ರಾಜ್ಯ ಸರಕಾರ ಜಾರಿಗೊಳಿಸಿರುವ ವಾರಾಂತ್ಯ ಕಫ್ರ್ಯೂ ಹಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಶನಿವಾರ-ರವಿವಾರ ಕೆಲವೆಡೆಗಳಲ್ಲಿ ಸಂತೆ ನಡೆಯುವುದಕ್ಕೆ ಅಡ್ಡಿಯಾಗಿದೆ ಎಂದು ಹೇಲಿದ್ದಾರೆ.
ಇಲ್ಲಿನ ಕಲುಬುರ್ಗಿಯ ಫಿಲ್ಟರ್ ಬೆಡ್ ಪ್ರದೇಶದಲ್ಲಿ ಶನಿವಾರ ನಡೆಯುವ ಸಂತೆಯಲ್ಲಿ ಕುರಿ ಮಾರಾಟ ಸೇರಿದಂತೆ ವ್ಯಾಪಾರ ವಾಹಿವಾಟ ನಡೆಯುತ್ತಿದೆ.ಆದರೆ, ಸರಕಾರ ನಿಬರ್ಂಧ ವಿಧಿಸಿದೆ. ಇದರ ಜೀವನ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಜನ ಸಂಚಾರ ಹಾಗೂ ವಾಹನ ಓಡಾಟದಲ್ಲಿ ಕೊಂಚ ರಿಲೀಪ್ ಇತ್ತಾದರೂ, ಆನಂತರ ಪೊಲೀಸರು ರಸ್ತೆಗಳಿದು ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತಡೆ ಹಾಕಿದ ನಂತರ ನಗರದ ಬಹುತೇಕ ಸೇಮಿ ಲಾಕ್‌ಡೌನ್ ಪರಿಸ್ಥಿತಿಗೆ ಸಿಲುಕಿತು.
ಆಸ್ಪತ್ರೆ, ಮೆಡಿಕಲ್, ತರಕಾರಿ ಮಾರಾಟ, ಹಣ್ಣು- ಹಾಲು ಸೇರಿದಂತೆ ಕೈಗಾರಿಕೆಗಳ ಕೆಲಸಕ್ಕೆ ಹೋಗುವವರನ್ನು ಹೊರತು ಪಡಿಸಿ, ರಸ್ತೆಗಳಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸಿದರು.
ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿರುವ ವಾಹನಗಳ ತಪಾಸಣೆ ನಡೆಸಿ, ದಂಡ ಹಾಕುವ ಮೂಲಕ ವಾರಾಂತ್ಯ ಕರ್ಫ್ಯೂವಿನ ಬಿಸಿ ಮುಟ್ಟಿಸುತ್ತಿದ್ದಾರೆ.ಅನಗತ್ಯವಾಗಿ ದ್ವಿಚಕ್ರ ವಾಹನ, ಕಾರುಗಳಲ್ಲಿ ರಸ್ತೆಗೆ ಇಳಿದವರನ್ನು ಪ್ರಶ್ನಿಸುತ್ತಿರುವ ಪೊಲೀಸರು ಜಾಗೃತಿ ಮೂಡಿಸಿ, ಮನೆಗಳತ್ತ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.
ತುಮಕೂರು: ನಗರದಲ್ಲಿ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ವಾಣಿಜ್ಯ ಚಟುವಟಿಕೆಗಳ ಅಂಗಡಿಗಳ ಮಾಲೀಕರು ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಇಂದು ಎರಡನೇ ಶನಿವಾರ ಆಗಿರುವುದರಿಂದ ಯಾವುದೇ ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು, ಖಾಸಗಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ರಸ್ತೆಗಳಲ್ಲಿ ವಾಹನಗಳ ಸವಾರರ ಸಂಚಾರವೂ ವಿರಳವಾಗಿದೆ.
ಇನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಮತ್ತು ಖಾಸಗಿ ಬಸ್‍ಗಳು ಸಂಚಾರವೂ ವಿರಳವಾಗಿದ್ದು, ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್‍ಗಳನ್ನು ಓಡಿಸಲಾಗುತ್ತಿದೆ. ಸರಕಾರಿ ರಜೆ ಇರುವುದರಿಂದ ಎರಡೂ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತಿದ್ದವು.ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಅಂಗಡಿ, ತರಕಾರಿ, ಮಾಂಸ, ಮೀನು ಮಾರಾಟ ಅಂಗಡಿಗಳಿಗೆ ಮಾತ್ರ ಬಾಗಿಲು ತೆರೆಯಲು ಅವಕಾಶ ನೀಡಲಾಗಿದ್ದು, ಈ ಅಂಗಡಿಗಳ ಬಳಿ ಮಾತ್ರ ಅಲ್ಪಸ್ವಲ್ಪ ಜನ ಕಂಡು ಬರುತ್ತಿದ್ದು, ಎಲ್ಲರೂ ಮಾಸ್ಕ್ ಧರಿಸಿ ನಿಯಮ ಪಾಲನೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.







