ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳು ಅಪಾಯದಲ್ಲಿ: ಕ್ರೈಸ್ತ ಒಕ್ಕೂಟ ಕಳವಳ
ಉಡುಪಿ, ಜ.8: ಸಮವಸ್ತ್ರ ವಿಚಾರದಲ್ಲಿ ಇತ್ತೀಚೆಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ವೇಳೆಯಲ್ಲಿ ಕೆಲವು ಕಾಲೇಜು ವಿದ್ಯಾರ್ಥಿಗಳು ಕ್ರಿಶ್ಚಿಯನ್ ಶಾಲಾ ಕಾಲೇಜುಗಳನ್ನು ಹಿಂದೂ ಶಾಲಾ ಕಾಲೇಜಾನ್ನಾಗಿ ಮಾರ್ಪಡಿಸುತ್ತೇವೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಈ ಮೂಲಕ ಈ ಸಣ್ಣ ಪ್ರಾಯದಲ್ಲಿ ವಿದ್ಯಾರ್ಥಿ ಗಳೇ ಸಮಾಜದಲ್ಲಿ ದ್ವೇಷವನ್ನು ಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಆರೋಪಿಸಿದೆ.
ಈ ಬಗ್ಗೆ ಜಿಲ್ಲಾಡಳಿತ ತಕ್ಷಣ, ಯಾವುದೇ ಜಾತಿ ಧರ್ಮದವರಾಗಿದ್ದರು ಕೂಡ ಅವರ ವಿರುದ್ಧ ಸ್ವಯಂ ಪ್ರೇರಿತರಾಗಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಹೇಳಿಕೆಗಳನ್ನೂ ಕೊಡುವ ಮಕ್ಕಳ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರನ್ನೂ ಎಚ್ಚರಿಸುವ ಕಾರ್ಯವನ್ನು ಮಾಡಬೇಕು ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಶಾಂತ್ ಜತ್ತನ್ನ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕ್ರೈಸ್ತರನ್ನು ಮುಸಲ್ಮಾನರನ್ನು ಅಲ್ಪಸಂಖ್ಯಾತರನ್ನು ಕೊಚ್ಚಿ ಕೊಲ್ಲಬೇಕು, ಎಲ್ಲರೂ ಖಡ್ಗಗಳನ್ನು ಹಿಡಿದುಕೊಳ್ಳಿ ಎಂದು ಕರೆ ಕೊಡು ತ್ತಿರುವವರ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಕೇಸುಗಳನ್ನು ದಾಖಲಿಸಿ, ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.





