ಹಾಲಿವುಡ್ ನಮೇರುನಟ ಸಿಡ್ನಿ ಪಾಯಿಟರ್ ಇನ್ನಿಲ್ಲ: ಆಸ್ಕರ್ ಪುರಸ್ಕಾರಕ್ಕೆ ಪಾತ್ರರಾಗಿದ್ದ ಪ್ರಪ್ರಥಮ ಕಪ್ಪು ಜನಾಂಗೀಯ ನಟ

ಸಿಡ್ನಿ ಪಾಯಿಟರ್(photo:twitter)
ಲಾಸ್ಏಂಜಲೀಸ್,ಜ.8: ಹಾಲಿವುಡ್ ನ ಪ್ರಪ್ರಥಮ ಕಪ್ಪು ಜನಾಂಗೀಯ ನಟ ಹಾಗೂ 1950-60ರ ದಶಕದಲ್ಲಿ ಹಲವಾರು ಅವಿಸ್ಮರಣೀಯ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರಪ್ರೇಮಿಗಳ ಮನೆಮಾತಾಗಿದ್ದ ಸಿಡ್ನಿ ಪಾಯಿಟರ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಅಮೆರಿಕ ಹಾಗೂ ಬಹಾಮಾ ದೇಶಗಳ ಅವಳಿ ಪೌರತ್ವ ಹೊಂದಿದ್ದ ಪಾಯಿಟರ್ ಓರ್ವ ‘ ಅಪ್ರತಿಮ ವ್ಯಕ್ತಿ, ಓರ್ವ ನಾಯಕ, ಮಾರ್ಗದರ್ಶಕ, ಹೋರಾಟಗಾರ ಹಾಗೂ ರಾಷ್ಟ್ರೀಯ ಸಂಪತ್ತು’ ಆಗಿದ್ದರು ಎಂದು ಬಹಾಮಾದ ಉಪಪ್ರಧಾನಿ ಚೆಸ್ಟರ್ ಕೂಪರ್ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ತಿಳಿಸಿದ್ದಾರೆ.
1958ರ ದಶಕದಲ್ಲಿ ‘ ದಿ ಡಿಫಾಯಂಟ್ ಒನ್ಸ್’ ಚಿತ್ರದ ಮೂಲಕ ಸಿಡ್ನಿ ಪಾಯಿಟರ್ ಅವರು ಆಸ್ಕರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಪ್ರಪ್ರಥಮ ಕರಿಯ ಜನಾಂಗೀಯ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಆರು ವರ್ಷಗಳ ಬಳಿಕ ಅವರು ‘ಲಿಲ್ಲೀಸ್ ಆಫ್ ದಿ ಫೀಲ್ಡ್’ ಚಿತ್ರದ ಅಭಿನಯಕ್ಕಾಗಿ ಆಸ್ಕರ್ ಪುರಸ್ಕಾರವನ್ನು ಗೆದ್ದುಕೊಂಡು ಹೊಸ ದಾಖಲೆಯನ್ನು ನಿರ್ಮಿಸಿದರು.
ಅಮೆರಿಕದಲ್ಲಿ 1950 ಹಾಗೂ 1960ರ ದಶಕದಲ್ಲಿ ಜನಾಂಗೀಯ ಉದ್ವಿಗ್ನತೆ ತೀವ್ರವಾಗಿದ್ದ ಸಮಯದಲ್ಲಿ ಪಾಯಿಟರ್ ಅವರು ದ್ವೇಷಪ್ರಚಾರದ ಹಾಗೂ ಏಕತಾನತೆಯ ಪಾತ್ರಗಳಿಂದ ದೂರವಿರುವ ಮೂಲಕ ಅಪ್ಪಟ ಕಲಾವಿದನ ಕರ್ತವ್ಯ ಪ್ರಜ್ಞೆಯನ್ನು ಪ್ರದರ್ಶಿಸಿದ್ದರು.
‘‘ಗೆಸ್ ಹೂ ಕಮಿಂಗ್ ಟು ಡಿನ್ನರ್’’ ಹಾಗೂ ‘‘ ಇನ್ ದಿ ಹೀಟ್ ಆಫ್ ದಿ ನೈಟ್’’ ,‘‘ ಟು ಸರ್ ವಿದ್ ಲವ್’’ ಅವರ ಅಭಿನಯದ ಮೇರುಚಿತ್ರಗಳಾಗಿದ್ದು, ವಿಶ್ವದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿತ್ತು. 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಪಾಯಿಟರ್ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಎ ವಾರ್ಮ್ ಡಿಸೆಂಬರ್, ಸ್ಟಿರ್ ಕ್ರೇಝಿ ಸೇರಿದಂತೆ 9 ಚಿತ್ರಗಳನ್ನು ನಿರ್ದೇಶಿಸಿದ್ದರು.
ಟಿವಿ ಸರಣಿಯೊಂದರಲ್ಲಿ ಅವರು ವರ್ಣಭೇದ ವಿರೋಧಿ ಹೋರಾಟಗಾರ ಮತ್ತು ದ. ಆಫ್ರಿಕದ ಪ್ರಪ್ರಥಮ ಕಪ್ಪುಜನಾಂಗೀಯ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ಆಮೆರಿಕದ ಸುಪ್ರೀಂಕೋರ್ಟ್ನ ಪ್ರಪ್ರಥಮ ಕಪ್ಪುಜನಾಂಗೀಯ ನ್ಯಾಯಾಧೀಶ ಥುರ್ಗುಡ್ ಮಾರ್ಶಲ್ರಂತಹ ಮೇರು ವ್ಯಕ್ತಿಗಳ ಪಾತ್ರವನ್ನು ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ್ದರು.
1997ರಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿದ ಸಿಡ್ನಿ ಪಾಯಿಟರ್ ಅವರು ಜಪಾನ್ಗೆ ಬಹಾಮಾದ ‘ಗೌರವ ’ರಾಯಭಾರಿಯಾಗಿ ನೇಮಕಗೊಂಡಿದ್ದರು. 2009ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಸಿಡ್ನಿಪಾಯಿಟರ್ ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಅಮೆರಿಕದ ಸ್ವಾತಂತ್ರ್ಯ ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.







