ಅಫ್ಘಾನಿಸ್ತಾನಕ್ಕೆ ಭಾರತ ನೆರವಿನ ಹಸ್ತ: ಮೂರನೆ ಕಂತಿನ ಔಷಧಿ ಸಾಮಾಗ್ರಿಗಳ ರವಾನೆ

(photo:twitter/@MEAIndia)
ಕಾಬೂಲ್,ಫೆ.8: ಅಫ್ಘಾನ್ ಜನತೆಗೆ ನೀಡಲಾಗುತ್ತಿರುವ ಮಾನವೀಯ ನೆರವಿನ ಭಾಗವಾಗಿ ಭಾರತವು ಶುಕ್ರವಾರ ಅಫ್ಘಾನಿಸ್ತಾನಕ್ಕೆ ಎರಡು ಟನ್ ಜೀವರಕ್ಷಕ ಔಷಧಿಗಳನ್ನು ಒಳಗೊಂಡ ವೈದ್ಯಕೀಯ ಸಾಮಾಗ್ರಿಗಳ ಮೂರನೆ ಕಂತನ್ನು ರವಾನಿಸಿದೆ. ಈ ಔಷಧಿ ಸಾಮಾಗ್ರಿಗಳನ್ನು ಕಾಬೂಲ್ ನಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆಯೆಂದು ಭಾರತ ಸರಕಾರದ ಮೂಲಗಳು ತಿಳಿಸಿವೆ.
ಈ ಸಂದರ್ಭ ಭಾರತದ ವಿದೇಶಾಂಗ ಸಚಿವಾಲಯವು ಶುಕ್ರವಾರ ಹೇಳಿಕೆಯೊಂದನ್ನು ನೀಡಿದ್ದು, ‘‘ಅಫ್ಘಾನಿಸ್ತಾನದ ಜನತೆಯ ಜೊತೆಗೆ ನಮ್ಮ ವಿಶೇಷ ಬಾಂಧವ್ಯವನ್ನು ಮುಂದುವರಿಸಲು ಭಾರತವು ಬದ್ಧವಾಗಿದೆ’’ ಎಂದು ತಿಳಿಸಿದೆ.
ಮುಂಬರುವ ವಾರಗಳಲ್ಲಿ ಭಾರತವು ಔಷಧಿಗಳು ಹಾಗೂ ಆಹಾರಧಾನ್ಯಗಳು ಒಳಗೊಂಡಂತೆ ಮಾನವೀಯ ನೆರವುಗಳನ್ನು ಇನ್ನಷ್ಟು ಕಂತುಗಳಲ್ಲಿ ಪೂರೈಕೆ ಮಾಡಲಿದೆಯೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತವು ಇತ್ತೀಚೆಗೆ ಕೋವಿಡ್ ಲಸಿಕೆಯ 5 ಲಕ್ಷ ಡೋಸ್ಗಳು ಹಾಗೂ 1.6 ಲಕ್ಷ ಟನ್ ವೈದ್ಯಕೀಯ ನೆರವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಓ) ಪೂರೈಕೆ ಮಾಡಿತ್ತು. ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತ ಚುಕ್ಕಾಣಿಯನ್ನು ಹಿಡಿದ ಬಳಿಕ ಭಾರತವು ಮೊತ್ತ ಮೊದಲ ಬಾರಿಗೆ ಡಿಸೆಂಬರ್ 11ರಂದು ಆ ದೇಶಕ್ತಕೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡಿತ್ತು.
ಇದೇ ವೇಳೆ ಭಾರತವು ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಸರಕಾರ ರಚನೆಗೆ ಆಗ್ರಹಿಸುತ್ತಿದೆ ಹಾಗೂ ಯಾವುದೇ ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಘಾನ್ ನೆಲವು ಬಳಕೆಯಾಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದೆ.







