ಕ್ರಿಮಿನಲ್ ಸಂಚಿನ ಆರೋಪ: ಕಾಶ್ಮೀರಿ ಪತ್ರಕರ್ತ ಸಾಜದ್ ಗುಲ್ ಬಂಧನ, ವ್ಯಾಪಕ ಖಂಡನೆ

ಸಾಜದ್ ಗುಲ್(photo:twitter/@SajadGUL_)
ಶ್ರೀನಗರ,ಜ.8: ಕಾಶ್ಮೀರಿ ಪತ್ರಕರ್ತ ಸಾಜದ್ ಗುಲ್ ಅವರನ್ನು ಕ್ರಿಮಿನಲ್ ಒಳಸಂಚು ಮತ್ತು ಇತರ ಆರೋಪಗಳಡಿ ಬಂಧಿಸಲಾಗಿದೆ. ಗುಲ್ ಕೆಲವು ದಿನಗಳ ಹಿಂದೆ ಶ್ರೀನಗರದಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ತನ್ನ ಸದಸ್ಯನನ್ನು ಕಳೆದುಕೊಂಡಿದ್ದ ಕುಟುಂಬವು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು.
‘ದಿ ಕಾಶ್ಮೀರವಾಲಾ’ ಪತ್ರಿಕೆಯಲ್ಲಿ ವರದಿಗಾರನಾಗಿ ತರಬೇತಿ ಪಡೆಯುತ್ತಿರುವ ಜರ್ನಲಿಸಂ ವಿದ್ಯಾರ್ಥಿ ಗುಲ್ ವಿರುದ್ಧ ಐಪಿಸಿಯ ಕಲಂ 153 ಬಿ ಮತ್ತು 505 ಬಿ ಅಡಿಯಲ್ಲಿಯೂ ಆರೋಪಗಳನ್ನು ಹೊರಿಸಲಾಗಿದೆ.
ಸೋಮವಾರ ಶ್ರೀನಗರದ ಹೊರವಲಯದ ಹರ್ವಾನ್ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಲಷ್ಕರೆ ತೈಬಾದ ಕಮಾಂಡರ್ ಎನ್ನಲಾದ ಸಲೀಂ ಪರ್ರೆಯ ಹತ್ಯೆಯ ವಿರುದ್ಧ ನಡೆದಿದ್ದ ಪ್ರತಿಭಟನೆಯನ್ನು ಗುಲ್ ಪೋಸ್ಟ್ ಮಾಡಿದ್ದ ವೀಡಿಯೊ ತೋರಿಸಿತ್ತು. ಪರ್ರೆ ಹತ್ಯೆಯ ಬಳಿಕ ಉತ್ತರ ಕಾಶ್ಮೀರದಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಗುಲ್ರನ್ನು ಜ.5ರಂದು ಬಂಧಿಸಲಾಗಿದೆ ಎಂದು ಅವರ ಸೋದರ ತಿಳಿಸಿದ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೇರಿದಂತೆ ಹಲವಾರು ಜನರು ಗುಲ್ ಬಂಧನವನ್ನು ಖಂಡಿಸಿದ್ದಾರೆ.
‘ಮುಸ್ಲಿಮರ ಮಾರಣಹೋಮಕ್ಕೆ ಕರೆಗಳನ್ನು ನೀಡುತ್ತಿರುವ ಮೂಲಭೂತವಾದಿ ಗುಂಪುಗಳು ಮುಕ್ತವಾಗಿ ಓಡಾಡುತ್ತಿದ್ದರೆ ಸರಕಾರಿ ಪ್ರಾಯೋಜಿತ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ವರದಿ ಮಾಡುತ್ತಿರುವ ಕಾಶ್ಮೀರಿ ಪತ್ರಕರ್ತರನ್ನು ಜೈಲಿಗೆ ತಳ್ಳಲಾಗುತ್ತಿದೆ. ಕಾನೂನುಗಳಿಗೂ ಕೋಮುಬಣ್ಣವನ್ನು ನೀಡಲಾಗಿದೆ’ ಎಂದು ಮುಫ್ತಿ ಟ್ವೀಟಿಸಿದ್ದಾರೆ.
ಪೊಲೀಸರ ಕ್ರಮದಿಂದ ತನಗೆ ಆತಂಕವುಂಟಾಗಿದೆ ಎಂದು ಹೇಳಿರುವ ದಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್,ಗುಲ್ರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮತ್ತು ಅವರ ಪತ್ರಿಕೋದ್ಯಮ ಕಾರ್ಯದ ಕುರಿತು ತನಿಖೆಯನ್ನು ಕೈಬಿಡುವಂತೆ ಅಧಿಕಾರಿಗಳನ್ನು ಆಗ್ರಹಿಸಿದೆ.
ಪತ್ರಿಕೋದ್ಯಮವನ್ನು ಅಪರಾಧೀಕರಿಸಕೂಡದು ಎಂದು ಹೇಳಿರುವ ದಿ ಕಾಶ್ಮೀರವಾಲಾದ ಮುಖ್ಯ ಸಂಪಾದಕ ಫಹಾದ್ ಶಾ ಅವರು,ಗುಲ್ ಅವರ ಶೀಘ್ರ ಬಿಡುಗಡೆಗಾಗಿ ನಮ್ಮ ಕಾನೂನು ತಂಡವು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.







