ಈಶಾನ್ಯ ಅಮೆರಿಕದಲ್ಲಿ ಭಾರೀ ಹಿಮಮಾರುತ: ನೂರಾರು ವಿಮಾನಗಳ ಹಾರಾಟ ರದ್ದು, ಶಾಲೆಗಳ ಮುಚ್ಚುಗಡೆ

ಸಾಂದರ್ಭಿಕ ಚಿತ್ರ:PTI
ನ್ಯೂಯಾರ್ಕ್,ಜ.8: ಈಶಾನ್ಯ ಅಮೆರಿಕದಲ್ಲಿ ‘ಬಾಂಬ್ ಸೈಕ್ಲೋನ್’ ಎಂದೇ ಕರೆಯಲಾಗುವ ಚಳಿಗಾಲದ ಹಿಮಮಾರುತವು ಭೀಕರವಾಗಿ ಬೀಸುತ್ತಿದ್ದು ನೂರಾರು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ, ಶಾಲೆಗಳನ್ನು ಮುಚ್ಚುಗಡೆಗೊಳಿಸಲಾಗಿದೆ ಮತ್ತು ವಾಹನಗಳು ಸಂಚರಿಸಲು ದುಸ್ತರವಾದಂತಹ ಪರಿಸ್ಥಿತಿಯುಂಟಾಗಿದೆ.
ಕೆಂಟಕಿ, ನಾಶ್ವಿಲ್ಲೆ ಹಾಗೂ ಟೆನ್ನಿಸ್ಸಿಗಳಲ್ಲಿ ಭಾರೀ ಪ್ರಮಾಣದ ಹಿಮಮಳೆಯೊಂದಿಗೆ ಆಗಮಿಸಿದ ಬಾಂಬ್ ಸೈಕ್ಲೋನ್, ಆನಂತರ ವರ್ಜಿನಿಯಾ ಹಾಗೂ ವಾಶಿಂಗ್ಟನ್ ಡಿಸಿ ಪ್ರದೇಶದವರೆಗೂ ವ್ಯಾಪಿಸಿದೆ. ಇದೀಗ ಅದು ಅಟ್ಲಾಂಟಿಕ್ ಸಮುದ್ರ ಪ್ರದೇಶದತ್ತ ಧಾವಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ವಿಮಾನನಿಲ್ದಾಣದಲ್ಲಿ ಎಂಟು ಇಂಚಿಗೂ ಅಧಿಕ ಹಿಮ ಸುರಿದಿದ್ದು, ಅಲ್ಲಿ ಶುಕ್ರವಾ ಬೆಳಗ್ಗಿನಿಂದ 340 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಸಮೀಪದ ಜೆಎಫ್ಕೆ ವಿಮಾನನಿಲ್ದಾಣದಲ್ಲೂ 220 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದ್ದು, ಬಾಸ್ಟನ್ ನ ಲೊಗಾನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಯೂ 250 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ನ್ಯೂಯಾರ್ಕ್ ಸಮೀಪದ ಚಕ್ಟೊವಾಗಾದಲ್ಲಿ ಗರಿಷ್ಠ 19 ಇಂಚುಗಳಷ್ಟು ಹಿಮಮಳೆಯಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ (ಎನ್ಡಬ್ಲುಎಸ್) ಇಲಾಖೆ ತಿಳಿಸಿದೆ.







