ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವುದನ್ನು ಸಮರ್ಥಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್

photo: @BCNagesh_bjp
ಬೆಂಗಳೂರು: ವಿದ್ಯಾರ್ಥಿನಿಯರ ಸ್ಕಾರ್ಫ್ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಕಾಲೇಜುಗಳಿಗೆ ಬರುವ ಮಕ್ಕಳ ಕ್ರಮವನ್ನು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಾಲೇಜು ಒಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದಕ್ಕೆ ವಿರೋಧವಾಗಿ ಹಿಂದುತ್ವ ಸಂಘಟನೆಯ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ಬರಲು ಆರಂಭಿಸಿರುವುದು ಸಾಕಷ್ಟು ಚರ್ಚಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಕೇಸರಿ ಶಾಲು ಧರಿಸಿ ಬರುವ ವಿದ್ಯಾರ್ಥಿಗಳನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವ ʼಕ್ರಿಯೆಗೆ ಪ್ರತಿಕ್ರಿಯೆಯಾಗಿʼ ಕೇಸರಿ ಶಾಲು ಧರಿಸಿ ಬರುವುದು ಆರಂಭವಾಗಿದೆ. ಕ್ರಿಯೆ ಇದ್ದರೆ ಪ್ರತಿಕ್ರಿಯೆ ಇದ್ದೇ ಇರುವುದು ಸಾಮಾನ್ಯ ಎಂಬರ್ಥದಲ್ಲಿ ಸಚಿವರು ಮಾತನಾಡಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿದ ಬಿಸಿ ನಾಗೇಶ್, ಕೆಲವು ಸಂಘಟನೆಗಳು ಭಿನ್ನತೆಯನ್ನು ಸೃಷ್ಟಿಸಿ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪದಲ್ಲಿರುವ ಪಿಯು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುವುದನ್ನು ವಿವಾದವಾಗಿಸಲಾಗಿತ್ತು. ಸಮವಸ್ತ್ರದ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂಬ ನೆಪದಲ್ಲಿ ಜನವರಿ 1 ರಿಂದ ವಿದ್ಯಾರ್ಥಿನಿಯರನ್ನು ತರಗತಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿತ್ತು.







