ಕೋವಿಡ್ ಹೆಚ್ಚಳದ ನಡುವೆಯೂ ರಾಜ್ಯದಲ್ಲಿ ಟೆಸ್ಟಿಂಗ್ ವಿಳಂಬ: ವರದಿ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಮೂರನೇ ಅಲೆಯ ಆರಂಭದ ಸೂಚನೆಯ ನಡುವೆ ಇದೇ ಮೊದಲ ಬಾರಿಗೆ ಶಂಕಿತ ಸೋಂಕಿತರ ಪರೀಕ್ಷೆ ಪ್ರಮಾಣ ಇದುವರೆಗಿನ ಗರಿಷ್ಠ ಮಟ್ಟ ತಲುಪಿದೆ. ಶುಕ್ರವಾರ ರಾಜ್ಯದಲ್ಲಿ 2.03 ಮಾದರಿಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ. ಆದರೆ ರಾಜ್ಯದ ಹಲವು ಕಡೆಗಳಲ್ಲಿ ಪರೀಕ್ಷಾ ವರದಿ ವಿಳಂಬವಾಗಿ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ರಾಜ್ಯದ 97 ಸರ್ಕಾರಿ ಪ್ರಯೋಗಾಲಯಗಳಲ್ಲಿ 1,18,500 ಮತ್ತು 168 ಖಾಸಗಿ ಪ್ರಯೋಗಾಲಯಗಳಲ್ಲಿ 1,01,480 ಮಾದರಿಗಳು ಸೇರಿ 2,19,980 ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ರಾಜ್ಯದಲ್ಲಿ ಸೋಂಕಿನ ಧನಾತ್ಮಕತೆ ದರ ಶೇಕಡ 4.16ಕ್ಕೇರಿದೆ. ಈ ಹಿಂದಿನ ವಾರ ಸರಾಸರಿ ಧನಾತ್ಮಕತೆ ದರ ಶೇಕಡ 2.02ರಷ್ಟಿತ್ತು.
ಕೋವಿಡ್ ವಾರ್ ರೂಂ ದತ್ತಾಂಶಗಳ ಪ್ರಕಾರ ಬಹಳಷ್ಟು ಜಿಲ್ಲೆಗಳಲ್ಲಿ ಪರೀಕ್ಷಾ ವರದಿಗಳು ಪ್ರಕಟವಾಗಲು 48 ಗಂಟೆಗಳು ಆಗುತ್ತಿರುವುದು ದೊಡ್ಡ ಸಮಸ್ಯೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡಾ ಶೇಕಡ 56ರಷ್ಟು ಪರೀಕ್ಷಾ ಫಲಿತಾಂಶಗಳು ಮಾತ್ರ 24 ಗಂಟೆಗಳ ಒಳಗೆ ಬರುತ್ತಿವೆ. ಶೇಕಡ 6ರಷ್ಟು ಪ್ರಕರಣಗಳಲ್ಲಿ ಫಲಿತಾಂಶ ಎರಡು ದಿನಗಳಿಗಿಂತಲೂ ವಿಳಂಬವಾಗುತ್ತಿದೆ. ರಾಜ್ಯ ಕೋವಿಡ್ ವಾರ್ ರೂಂ ಮಾಹಿತಿಯ ಪ್ರಕಾರ, ರಾಯಚೂರು, ಯಾದಗಿರಿ, ಯತ್ತರ ಕನ್ನಡ, ಕೊಪ್ಪಳ, ತುಮಕೂರು, ಬಳ್ಳಾರಿ, ಬೀದರ್, ಬೆಳಗಾವಿ ಮತ್ತು ವಿಜಯಪುರಗಳಲ್ಲಿನ ಫಲಿತಾಂಶಗಳು ವಿಳಂಬವಾಗುತ್ತಿವೆ.
ಉದಾಹರಣೆಗೆ ಜನವರಿ 6ರಂದು ಸಂಗ್ರಹಿಸಿದ 1656 ಮಾದರಿಗಳ ಪೈಕಿ ಕೇವಲ 316 ಮಾದರಿಗಳ ಫಲಿತಾಂಶವನ್ನಷ್ಟೇ 24 ಗಂಟೆಗಳ ಒಳಗಾಗಿ ನೀಡಲು ಸಾಧ್ಯವಾಗಿದೆ. ಉಳಿದ 1286 ಫಲಿತಾಂಶಗಳು 24-48 ಗಂಟೆಗಳ ಅವಧಿಯಲ್ಲಿ ಬಂದಿದ್ದರೆ, 54 ಮಾದರಿಗಳ ಫಲಿತಾಂಶಕ್ಕೆ 48 ಗಂಟೆಗೂ ಅಧಿಕ ಸಮಯ ಬೇಕಾಗಿದೆ.
ಮೂಲಸೌಕರ್ಯಗಳ ಇತಿಮಿತಿಗಳು ಈ ವಿಳಂಬಕ್ಕೆ ಕಾರಣ ಎನ್ನುವುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಅವರು ತಿಳಿಸಿದ್ದಾರೆ. ಬೆಳಗ್ಗೆ ಸಂಗ್ರಹಿಸಿದ ಮಾದರಿಗಳನ್ನು ತಡರಾತ್ರಿವರೆಗೂ ಪರೀಕ್ಷಾ ಪ್ರಕ್ರಿಯೆಗೆ ಒಳಪಡಿಸುವುದರಿಂದ ಫಲಿತಾಂಶ ವಿಳಂಬವಾಗುತ್ತಿದೆ. ಹಗಲು ರಾತ್ರಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ದಿನಕ್ಕೆ 2100 ಮಾದರಿಗಳ ಪರೀಕ್ಷೆ ನಡೆಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಅಂತೆಯೇ ತುಮಕೂರಿನಲ್ಲಿ 3331 ಪ್ರಕರಣಗಳ ಪೈಕಿ 2000 ಮಾದರಿಗಳ ಫಲಿತಾಂಶ ಮಾತ್ರ (ಶೇಕಡ 43) 24 ರಿಂದ 48 ಗಂಟೆಗಳ ಒಳಗಾಗಿ ಬರುತ್ತಿದೆ. ತುಮಕೂರಿನಲ್ಲಿ ಬೆಂಗಳೂರಿನ ಮಾದರಿಗಳ ಪರೀಕ್ಷೆಯೂ ನಡೆಯುತ್ತಿದೆ. ಅಲ್ಲಿ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳವಾಗಿರುವುದು ವಿಳಂಬಕ್ಕೆ ಕಾರಣ ಎಂದು ಡಿಎಚ್ಓ ಡಾ.ಎಂ.ಬಿ.ನಾಗೇಂದ್ರಪ್ಪ ಹೇಳಿದ್ದಾರೆ.







