ಮುಸ್ಲಿಂ ಮಹಿಳೆಯರನ್ನು ಹರಾಜಿಗಿಡುತ್ತಿದ್ದ ʼಸಲ್ಲಿ ಡೀಲ್ಸ್ʼ ಸೃಷ್ಟಿಕರ್ತನ ಬಂಧನ: ಪೊಲೀಸ್

Photo: Thehindu.com
ಸಲ್ಲಿ ಡೀಲ್ಸ್ ಎಂಬ ಆಪ್ಲಿಕೇಶನ್ ಮೂಲಕ ಮುಸ್ಲಿಂ ಮಹಿಳೆಯರ ಫೋಟೊವನ್ನು ಬಳಸಿ ಹರಾಜಿಗಿಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ವ್ಯಕ್ತಿಯೋರ್ವನನ್ನು ದಿಲ್ಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಸಲ್ಲಿ ಡೀಲ್ಸ್ ಅಪ್ಲಿಕೇಶನ್ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಈ ಆಪ್ ನಲ್ಲಿ ಮುಸ್ಲಿಂ ಮಹಿಳೆಯರ ಫೋಟೊಗಳನ್ನು ಬಳಸಿ ಹರಾಜಿಗೆ ಪಟ್ಟಿ ಮಾಡಲಾಗಿತ್ತು. ಆರೋಪಿಯನ್ನು ಓಂಕಾರೇಶ್ವರ್ ಠಾಕೂರ್ ಎಂದು ಗುರುತಿಸಲಾಗಿದೆ.
'ಸಲ್ಲಿ ಡೀಲ್ಸ್' ಮತ್ತು ಇತ್ತೀಚೆಗೆ ರಚಿಸಲಾದ 'ಬುಲ್ಲಿ ಬಾಯಿ' ಅಪ್ಲಿಕೇಶನ್ಗಳಲ್ಲಿ ಮುಸ್ಲಿಂ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ ಮತ್ತು ಅವರ ವಿರುದ್ಧ ಅನುಚಿತ ಟೀಕೆ ಮತ್ತು ಹೇಳಿಕೆಗಳನ್ನು ರವಾನಿಸಲಾಗಿದೆ. ಎರಡೂ ಅಪ್ಲಿಕೇಶನ್ಗಳು ಕದ್ದ ಫೋಟೋಗಳನ್ನು ಹರಾಜು ಮಾಡಲು ಹೋಸ್ಟಿಂಗ್ ಪ್ಲಾಟ್ಫಾರ್ಮ್ 'ಗಿಟ್ಹಬ್' ಅನ್ನು ಬಳಸಿಕೊಂಡಿವೆ.
ಆರೋಪಿ ಓಂಕಾರೇಶ್ವರ್ ಠಾಕೂರ್ ನನ್ನು ಮಧ್ಯಪ್ರದೇಶದ ಇಂದೋರ್ನಲ್ಲಿ ದಿಲ್ಲಿ ಪೊಲೀಸರ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ತಂಡವು ಬಂಧಿಸಿದೆ.
"ಓಂ ಠಾಕೂರ್ ನನ್ನು ಇಂದೋರ್ನಿಂದ ಬಂಧಿಸಲಾಗಿದೆ. ಸುಲ್ಲಿ ಡೀಲ್ ಆ್ಯಪ್ ಪ್ರಕರಣದ ಹಿಂದಿನ ಪ್ರಮುಖ ಸೂತ್ರಧಾರ ಈತ" ಎಂದು ದಿಲ್ಲಿ ಪೊಲೀಸ್ ವಿಶೇಷ ಕೋಶದ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ ಘಟಕದ ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
26ರ ಹರೆಯದ ಠಾಕೂರ್ ಇಂದೋರ್ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ವ್ಯಾಸಂಗ ಮಾಡಿದ್ದಾನೆ ಮತ್ತು ನ್ಯೂಯಾರ್ಕ್ ಸಿಟಿ ಟೌನ್ಶಿಪ್ನ ನಿವಾಸಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ. ಠಾಕೂರ್ ಗಿಟ್ಹಬ್ನಲ್ಲಿ 'ಸಲ್ಲಿ ಡೀಲ್ಸ್' ಕೋಡ್ ಅನ್ನು ಅಭಿವೃದ್ಧಿಪಡಿಸಿ ಟ್ವಿಟರ್ನಲ್ಲಿ ಅಪ್ಲಿಕೇಶನ್ ಅನ್ನು ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.







