ಸಚಿವ ಎಸ್.ಟಿ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ಮೇಲ್: ಆರೋಪಿ ಸಿಸಿಬಿ ವಶಕ್ಕೆ

(photo: twitter) ಸಚಿವ ಎಸ್.ಟಿ ಸೋಮಶೇಖರ್, ನಿಶಾಂತ್
ಬೆಂಗಳೂರು, ಜ.9: ಸಚಿವ ಎಸ್.ಟಿ.ಸೋಮಶೇಖರ್ ಅವರ ಪುತ್ರ ನಿಶಾಂತ್ನ ಅಶ್ಲೀಲ ವಿಡಿಯೊ ಇದೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಜ್ಯೋತಿಷಿ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇಲ್ಲಿನ ಆರ್ಟಿ ನಗರದ ಪ್ರಸಿದ್ಧ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಬಂಧಿತ ಆರೋಪಿಯಾಗಿದ್ದು, ಈತ ಪವರ್ ಸುದ್ದಿ ವಾಹಿನಿಯ ನಿರ್ದೇಶಕನೂ ಆಗಿದ್ದ ಎಂದು ಮೂಲಗಳು ತಿಳಿಸಿವೆ.
ಅಪರಿಚಿತರು ಸಂಚು ರೂಪಿಸಿ ನಕಲಿ ಅಶ್ಲೀಲ ವಿಡಿಯೊ ಸೃಷ್ಟಿಸಿ ನಮ್ಮ ತಂದೆಯವರ ಆಪ್ತ ಸಹಾಯಕರಾದ ಶ್ರೀನಿವಾಸಗೌಡ, ಭಾನು ಪ್ರಕಾಶ್ ಅವರ ಮೊಬೈಲ್ಗೆ ಪದೇ ಪದೇ ವಿಡಿಯೊ, ಸಂದೇಶ ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದರು.
ಹಣ ಕೊಡದಿದ್ದರೆ ಈ ಅಶ್ಲೀಲ ವಿಡಿಯೋದಲ್ಲಿರುವ ದೃಶ್ಯಾವಳಿಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿಬಿಟ್ಟು ನನ್ನ ಹಾಗೂ ನನ್ನ ತಂದೆಯವರ ತೇಜೋವಧೆ ಮಾಡುವುದಾಗಿ ಬೆದರಿಕೆವೊಡ್ಡಿದ್ದರು ಎಂದು ಆರೋಪಿಸಿ ಸಚಿವರ ಪುತ್ರ ನಿಶಾಂತ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಇದರನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಶಾಸಕನ ಪುತ್ರಿಯ ಹೆಸರು ಉಲ್ಲೇಖ?
ಪ್ರಕರಣದಲ್ಲಿ ಜ್ಯೋತಿಷಿ ಪುತ್ರ ರಾಹುಲ್ ಭಟ್ ಜತೆ ರಾಕೇಶ್ ಅಣ್ಣಪ್ಪ ಎಂಬಾತನ ಹೆಸರು ಕೇಳಿ ಬಂದಿದೆ. ಮತ್ತೊಂದೆಡೆ ರಾಕೇಶ್ ಅಣ್ಣಪ್ಪನಿಂದ ಮೊಬೈಲ್ ಪಡೆದು ವಿಡಿಯೊ ಕಳಿಸಿದ್ದಾನೆ ಎನ್ನಲಾಗಿದೆ. ಆದರೆ, ಮೊಬೈಲ್ ಸಿಮ್ ಶಾಸಕರ ಪುತ್ರಿಯ ಹೆಸರಿನಲ್ಲಿತ್ತು ಎಂದು ಹೇಳಲಾಗುತ್ತಿದ್ದು, ಸಿಸಿಬಿ ಪೊಲೀಸರು ಶಾಸಕರ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.







