ಹಿರಿಯ ಜನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ನಿಧನ

ಧಾರವಾಡ, ಜ.9: ಹಿರಿಯ ಜನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ(65) ಅವರು ರವಿವಾರ ಅನಾರೋಗ್ಯದಿಂದ ನಿಧನರಾದರು.
ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಅವರಿಗೆ ಪತ್ನಿ ಕಲಾವಿದೆ ವಿಶ್ವೇಶ್ವರಿ ಹಿರೇಮಠ ಹಾಗೂ ಪುತ್ರ ಇದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರಿನವರಾದ ಬಸವಲಿಂಗಯ್ಯ ನೀನಾಸಂ ಶಿಕ್ಷಣ ಪಡೆದಿದ್ದರು. ಸುಗಮ ಸಂಗೀತ ಗಾಯಕರಾಗಿ, ದೊಡ್ಡಾಟ, ಸಣ್ಣಾಟ, ಪಾರಿಜಾತ ನಾಟಕಗಳನ್ನು ಆಧುನಿಕ ರಂಗಭೂಮಿಗೆ ಪರಿಚಯಿಸಿ ಅವುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಅವುಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿದರು.
ಕುಲಗೋಡು ತಮ್ಮಣ್ಣ ವಿರಚಿತ 12 ಗಂಟೆಗಳ ಅವಧಿಯ ಶ್ರೀ ಕೃಷ್ಣ ಪಾರಿಜಾತವನ್ನು ಮೂರು ಗಂಟೆಯಲ್ಲಿ ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿ ಸಾವಿರಕ್ಕೂ ಅಧಿಕ ಪ್ರಯೋಗದಿಂದ ಜನ ಮಾನಸದಲ್ಲಿ ಛಾಪು ಮೂಡಿಸಿದ್ದರು. ಜಾನಪದ ಸಂಶೋಧನಾ ಸಂಸ್ಥೆ ಆರಂಭಿಸಿ ಯುವ ಕಲಾವಿದರು, ಯುವ ಸಮೂಹವನ್ನು ಸಜ್ಜುಗೊಳಿಸಿದ್ದರು. ಬಸವಲಿಂಗಯ್ಯ ಅವರ ಕಂಚಿನಕಂಠದ ಹಾಡುಗಾರಿಕೆಗೆ ಎಲ್ಲರೂ ತಲೆತೂಗುತ್ತಿದ್ದರು.
ಅಮೆರಿಕ, ಇಂಗ್ಲೆಂಡ್, ದುಬೈ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳಲ್ಲಿ ಕೂಡ ಕೃಷ್ಣ ಪಾರಿಜಾತ ಸಣ್ಣಾಟ ಪ್ರದರ್ಶನ ನೀಡಿದ್ದ ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿದ್ದವು.
ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ (10-1-2022) 11.30 ಕ್ಕೆ ಶ್ರೀ ನಿಜಗುಣಾನಂದ ಸ್ವಾಮಿಗಳು ಬೈಲೂರಮಠ ಅವರ ಸಾನಿಧ್ಯ ದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಎಂ ಬೊಮ್ಮಾಯಿ ಸಂತಾಪ: ಬಸವಲಿಂಗಯ್ಯ ಹಿರೇಮಠ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಸವಲಿಂಗಯ್ಯ ಅವರು ಕರ್ನಾಟಕದಲ್ಲಿ ಜಾನಪದ ಕಲೆಯನ್ನು ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ ಜಾನಪದ ಗೀತೆ ಹಾಗೂ ಸಂಗೀತವನ್ನು ಜೀವಂತವಿರಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದರು.
ಅವರ ನಿಧನದಿಂದ ಕನ್ನಡ ಸಾರಸ್ವತ ಹಾಗೂ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ನಿಧನದ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಆ ಭಗವಂತ ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಕಂಬನಿ ಮಿಡಿದಿದ್ದಾರೆ.
ಹಿರಿಯ ಜಾನಪದ ಕಲಾವಿದ, ಗಾಯಕ ಶ್ರೀ ಬಸಲಿಂಗಯ್ಯ ಹಿರೇಮಠ ಅವರ ನಿಧನರಾಗಿದ್ದು ತುಂಭಾ ದುಃಖದ ಸಂಗತಿ. ಅವರು ಕರ್ನಾಟಕದಲ್ಲಿ ಜಾನಪದ ಕಲೆಯನ್ನು ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ ಜಾನಪದ ಗೀತೆ ಹಾಗೂ ಸಂಗೀತವನ್ನು ಜೀವಂತವಿರಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತಿದ್ದರು.
— Basavaraj S Bommai (@BSBommai) January 9, 2022
1/2 pic.twitter.com/waOI4NerUe







