ನಾಲ್ವರು ಕನ್ನಡ ಹೋರಾಟಗಾರರಿಗೆ ಕೋರ್ಟ್‍ನಿಂದ ಜಾಮೀನು

ಬೆಳಗಾವಿ, ಜ.9: ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ತಿಲಕವಾಡಿಯ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಎಂಇಎಸ್ ಡಿ.13ರಂದು ಆಯೋಜಿಸಿದ್ದ ‘ಮಹಾಮೇಳಾವ’ ವೇಳೆ ಆ ಸಂಘಟನೆಯ ಅಧ್ಯಕ್ಷ ದೀಪಕ ದಳವಿ ಅವರ ಮುಖಕ್ಕೆ ಮಸಿ ಎರಚಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ನಾಲ್ವರು ಕನ್ನಡ ಹೋರಾಟಗಾರರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‍ಕುಮಾರ್ ದೇಸಾಯಿ, ಅನಿಲ ದಡ್ಡಿಮನಿ, ಸಚಿನ ಮಠದ ಮತ್ತು ರಾಹುಲ ಕಲಕಾಂಬಕರ ಅವರಿಗೆ ಜಾಮೀನು ದೊರೆತಿದೆ. ಅವರು ಸೋಮವಾರ ಅಥವಾ ಮಂಗಳವಾರ ಹಿಂಡಲಗಾ ಕಾರಾಗೃಹದಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹೋರಾಟಗಾರರ ಪರವಾಗಿ ವಕೀಲ ಶಾಮಸುಂದರ ಪತ್ತಾರ ವಕಾಲತ್ತು ವಹಿಸಿದ್ದರು.
ಆರೋಪಿಗಳ ವಿರುದ್ಧ ಪೊಲಿಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಕನ್ನಡ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Next Story





