ʼಸಲ್ಲಿ ಡೀಲ್ಸ್ʼ ಆರೋಪಿ ಬಂಧನದ ಕುರಿತು ದಿಲ್ಲಿ ಪೊಲೀಸ್ ನಮಗೆ ಮಾಹಿತಿ ನೀಡಿಲ್ಲ: ಇಂದೋರ್ ಪೊಲೀಸ್

ಇಂದೋರ್: ಮುಸ್ಲಿಂ ಮಹಿಳೆಯರನ್ನು ಹರಾಜಿಗಿಡುತ್ತಿದ್ದ ಸಲ್ಲಿ ಡೀಲ್ಸ್ ಅಪ್ಲಿಕೇಶನ್ ತಯಾರಿಸಿದ ಆರೋಪಿಯನ್ನು ಮಧ್ಯಪ್ರದೇಶದ ಇಂದೋರ್‌ನಿಂದ ದಿಲ್ಲಿ ಪೊಲೀಸರು ಬಂಧಿಸಿದ್ದರೂ, ಈ ಕುರಿತು ಮಧ್ಯಪ್ರದೇಶ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ ಎಂದು ವರದಿಯಾಗಿದೆ.
ʼಸಲ್ಲಿ ಡೀಲ್ಸ್ʼ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಇಂದೋರ್‌ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ಕಲಿತಿದ್ದ ಓಂಕರೇಶ್ವರ್ ಠಾಕೂರ್ ಎಂಬಾತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಅದಾಗ್ಯೂ, ಇಂದೋರ್ ಪೊಲೀಸ್ ಕಮಿಷನರ್ ಈ ಕುರಿತು ತನಗೆ ಮಾಹಿತಿಯಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.
ಇಂದೋರ್‌ನಿಂದ ಠಾಕೂರ್ ಎಂಬಾತನನ್ನು ದಿಲ್ಲಿ ಪೊಲೀಸರು ಬಂಧಿಸಿರುವ ವಿಚಾರ ನಮಗೆ ಮಾಧ್ಯಮದ ಮೂಲಕ ಗಮನಕ್ಕೆ ಬಂತು. ಇದುವರೆಗೂ ದಿಲ್ಲಿ ಪೊಲೀಸರು ಯಾವುದೇ ಅಧಿಕೃತ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿಲ್ಲ ಎಂದು ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣ್ ಮಿಶ್ರಾ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಪ್ರಕರಣದ ಅಧಿಕೃತ ವಿವರಗಳನ್ನು ತಮ್ಮೊಂದಿಗೆ ಹಂಚಿಕೊಂಡ ನಂತರ ಇಂದೋರ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಲು ಪರಿಗಣಿಸುತ್ತಾರೆ ಎಂದು ಮಿಶ್ರಾ ಹೇಳಿದ್ದಾರೆ.







