ಹಣ ಪಾವತಿಸಿದ ತಕ್ಷಣ ಮಾಲಕರಿಗೆ ವಾಹನ ಹಸ್ತಾಂತರಿಸಬೇಡಿ: ಆರ್‌ಟಿಓ
ಉಡುಪಿ, ಜ.9: ವಾಹನದ ನೋಂದಣಿಗೋಸ್ಕರ ವಾಹನದ ಅಡಿಗಚ್ಚಿನ ಪೆನ್ಸಿಲ್ ಮಾರ್ಕ್‌ನ್ನು ತೆಗೆದ ಕೂಡಲೇ ವಾಹನವನ್ನು ಯಾವ ಕಾರಣದಿಂದಲೂ ವಾಹನ ಮಾಲಕರಿಗೆ ನೀಡಬಾರದು. ನೋಂದಣಿ ಅರ್ಜಿಯನ್ನು ಕಚೇರಿಗೆ ಸಲ್ಲಿಸಿದ 24 ಗಂಟೆಯ ನಂತರವೇ ವಾಹನದ ಮಾಲಕರಿಗೆ ವಾಹನವನ್ನು ಹಸ್ತಾಂತರಿಸಬೇಕು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ತಿಳಿಸಿದ್ದಾರೆ.
ಇತ್ತೀಚೆಗೆ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ನಡೆದ ಉಡುಪಿ ಜಿಲ್ಲೆಯ ದ್ವಿಚಕ್ರ ಮತ್ತು ಲಘು ಮೋಟಾರು ವಾಹನ ಮಾರಾಟ ಗಾರರ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಹಣ ಪಾವತಿಸಿದ ಕೂಡಲೇ ಯಾರು ವಾಹನವನ್ನು ವಾಹನದ ಮಾಲಕರಿಗೆ ಹಸ್ತಾಂತರಿಸುತ್ತಾರೋ ಅವರೇ ವಾಹನ ಅಪಘಾತವಾದ ಸಂದರ್ಭದಲ್ಲಿ ಕಾನೂನು ರೀತಿಯ ಹೊಣೆಗಾರಿಕೆಯನ್ನು ಭರಿಸಬೇಕಾಗುತ್ತದೆ ಎಂದರು.
ನೋಂದಣಿಯಾದ ವಾಹನಗಳ ಪರಿಶೀಲನಾ ಪತ್ರವನ್ನು ಹೇಗೆ ಭರ್ತಿ ಮಾಡ ಬೇಕು ಹಾಗೂ ಗ್ಯಾಸ್ ರಹಿತ ವಾಹನಗಳಿಗೆ ಕೂಡ ಗ್ಯಾಸ್ ರಹಿತ ಎಂದು ಮೋಟಾರು ವಾಹನ ಮಾರಾಟಗಾರರ ಪರಿಶೀಲನಾ ವರದಿಯಲ್ಲಿ ಸೂಕ್ತವಾಗಿ ಸರಿಯಾಗಿ ಅಚ್ಚುಕಟ್ಟಾಗಿ ಭರ್ತಿ ಮಾಡುವ ವಿವರಗಳನ್ನು ಸಭೆಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ವಿಳಂಬವಾಗಿ ವಾಹನ ನೋಂದಣಿಗೆ ಅರ್ಜಿ ಸಲ್ಲಿಸುವುದರಿಂದ ಆಗುವಂತಹ ತೊಂದರೆ ಬಗ್ಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಆರ್‌ಟಿಓ ಕಚೇರಿ ಅಧೀಕ್ಷಕಿಯರಾದ ಪಮಿತ, ಗೀತಾ ಹಾಗೂ 25 ಮಂದಿ ಮಾರಾಟ ಗಾರರ ಪ್ರತಿನಿಧಿಗಳು ಹಾಜರಿದ್ದರು.
ಬಿಎಚ್ ಶ್ರೇಣಿಯ ವಾಹನ ನೋಂದಾವಣೆ
ಬಿಎಚ್ ಶ್ರೇಣಿಯ ವಾಹನಗಳನ್ನು ನೋಂದಾಯಿಸಲು ಡೀಲರ್ ಮೂಲಕವಾಗಲೀ, ವಾಹನದ ಮಾಲಕರಾಗಲೀ ನೋಂದಣಿ ಸಮಯದಲ್ಲಿ ವಾಹನದ ಮಾಲಕರ ವಿಳಾಸ, ಪುರಾವೆ, ಗುರುತು ಚೀಟಿ, ಸಂಬಂಧಪಟ್ಟ ಕಚೇರಿಯ ಅಧಿಕೃತ ಅಧಿಕಾರಿಯ ಮೊಹರು ಹಾಗೂ ಸರಿ ಇರುವ ವೇತನ ಪ್ರಮಾಣಪತ್ರ ಅದಕ್ಕೆ ತತ್ಸಬಂಧ ಅಧಿಕಾರಿಗಳ ದೃಢೀಕೃತ ಪ್ರತಿಗಳನ್ನು ನಮೂನೆ 20ರೊಂದಿಗೆ ಲಗತ್ತಿಸಿ ಪರಿಶೀಲನಾ ಸಮಯದಲ್ಲಿ ಎಲ್ಲವನ್ನೂ ಹಾಜರು ಪಡಿಸಬೇಕು ಎಂದು ಜೆ.ಪಿ.ಗಂಗಾಧರ ತಿಳಿಸಿದರು.
ಅಖಿಲ ಭಾರತ ಸೇವೆಯ ಅಧಿಕಾರಿಗಳು, ಅಂತಾರಾಜ್ಯ ವರ್ಗಾವಣೆ ಹೊಂದುವ ಹುದ್ದೆಯಲ್ಲಿರುವ ಬ್ಯಾಂಕ್ ಅಧಿಕಾರಿಗಳು, ಕೇಂದ್ರ ಸರಕಾರದ ಬಿಎಚ್ ಶ್ರೇಣಿಯ ವಾಹನಗಳ ನೋಂದಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಉಡುಪಿ ಆರ್‌ಟಿಓ ಕಚೇರಿಯಲ್ಲಿ 2021ರ ಜ.1ರಿಂದ 2022ರ ಜ.7 ರವರೆಗೆ ಎಲೆಕ್ಟ್ರಿಕ್ ವಾಹನಗಳಾದ ಮೋಟಾರ್ ಸೈಕಲ್ -714, ಮೋಟಾರು ಕಾರು- 29, ಆಟೋ ರಿಕ್ಷಾ -1 ನೋಂದಾಯಿಸಲಾಗಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.







