ಸಕಲೇಶಪುರ: ಅಂಬೇಡ್ಕರ್ ಸಂಘ ಸ್ಥಾಪಿಸುವುದನ್ನು ವಿರೋಧಿಸಿ ತಂಡದಿಂದ ದಲಿತರ ಮೇಲೆ ಹಲ್ಲೆ; ಆರೋಪ

ಸಕಲೇಶಪುರ: ಅಂಬೇಡ್ಕರ್ ಸಂಘ ಸ್ಥಾಪಿಸುವುದನ್ನು ವಿರೋಧಿಸಿ 40 ಜನರ ಗುಂಪೊಂದು ದಲಿತರ ಮೇಲೆ ಹಲ್ಲೆ ನಡೆಸಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಘಟನೆ ಇಲ್ಲಿನ ದೇವಲಕೆರೆ ಗ್ರಾ.ಪಂ ವ್ಯಾಪ್ತಿಯ ನೀಕನಹಳ್ಳಿ ಸಮೀಪದ ನಿರ್ಮಲಾ ನಗರದಲ್ಲಿ ಶನಿವಾರ ನಡೆದಿದೆ.
ಅಣ್ಣಪ್ಪ (30)ರಾಜು(32) ಸುಂದರ(28) ಹಲ್ಲೆಗೊಳಗಾಗಿರುವ ವ್ಯಕ್ತಿಗಳಾಗಿದ್ದು, ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆದಿ ಕರ್ನಾಟಕ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಇವರು ತಮ್ಮ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಸಂಘವನ್ನು ಸ್ಥಾಪಿಸಬೇಕು,
ಅವರ ಭಾವಚಿತ್ರ ಅಳವಡಿಸಿ, ಜೈ ಭೀಮ್ ಬಾವುಟಗಳನ್ನು ಅಳವಡಿಸಬೇಕು ಎಂದು ಚರ್ಚೆ ನಡೆಸಿದ್ದಾರೆ ಎಂಬ ವಿಚಾರವನ್ನು ತಿಳಿದ ಗುಂಪು ಇದನ್ನು ಆಕ್ಷೇಪಿಸಿದೆ ಎಂದು ಹೇಳಲಾಗಿದೆ.
ಇಲ್ಲಿ ಯಾವುದೇ ರೀತಿಯ ಸಂಘಗಳನ್ನು ರಚಿಸಬಾರದು ಎಂದು ದಲಿತ ಸಮುದಾಯದ ಕೆಲವು ಯುವಕರನ್ನು ಕರೆದು ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಬಳಿಕ ಶನಿವಾರ ರಾತ್ರಿ ವೇಳೆ 40 ಜನರ ಗುಂಪೊಂದು ಏಕಾಏಕಿ ಗ್ರಾಮಕ್ಕೆ ದಾಳಿ ನಡೆಸಿ ಅಣ್ಣಪ್ಪ ಎಂಬುವವರನ್ನು ಮನಸೋಇಚ್ಚೆ ಥಳಿಸಿ, ರಾಜು ಮತ್ತು ಸುಂದರ ಇವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಣ್ಣಪ್ಪನವರ ಕುತ್ತಿಗೆ, ಎಡಗಾಲಿಗೆ ಗಾಯಗಳಾಗಿದ್ದು, ರಾಜು ಹಾಗೂ ಸುಂದರ ಅವರಿಗೂ ಗಾಯಗಳಾಗಿವೆ. ಏಕಾ ಏಕಿ ನಮ್ಮ ಮೇಲೆ ದಾಳಿ ನಡೆಸಿ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಗೆ ಅಣ್ಣಪ್ಪ ಅವರು ನೀಡಿರುವ ದೂರಿನ ಮೇರೆಗೆ ಹಲ್ಲೆ ನಡೆಸಿರುವ ಆರೋಪಿಗಳಾದ ಪ್ರಸನ್ ಪೂಜಾರಿ, ಸುನಿಲ್ ಗೌಡ, ಅಶ್ವಥ್ ಪೂಜಾರಿ,ಮಣಿ , ಸಂತೋಷ್, ಹಿತೈಷಿ, ಮನೋಜ್ ಮೋಹನ್, ಗಿರೀಶ್ ಶೆಟ್ಟಿ, ನಿತಿನ್, ಶಮಿ ಗೌಡ, ನಿತಿನ್ ಬಂಡಾರಿ, ರಾಜುಗೌಡ, ಅಭಿಷೇಕ್ ಸೇರಿದಂತೆ 20 ಜನರ ಮೇಲೆ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.







