ಉಡುಪಿ ಜಿಲ್ಲೆಯಲ್ಲಿ 340 ಮಂದಿಗೆ ಕೋವಿಡ್ ಪಾಸಿಟಿವ್

ಉಡುಪಿ, ಜ.9: ಜಿಲ್ಲೆಯಲ್ಲಿ ರವಿವಾರ ಒಟ್ಟು 340 ಮಂದಿಯಲಿ ಕೊರೋನ ಸೋಂಕು ದೃಡಪಟ್ಟಿದೆ. ಈ ಮೂಲಕ ಬೆಂಗಳೂರು ನಗರ (9020) ಹಾಗೂ ಮೈಸೂರು (398) ಜಿಲ್ಲೆಗಳ ಬಳಿಕ ಇಂದು ಉಡುಪಿ ಜಿಲ್ಲೆಯಲ್ಲಿ ಮೂರನೇ ಅತ್ಯಧಿಕ ಸೋಂಕಿತರು ಕಂಡುಬಂದಿದ್ದಾರೆ.
ದಿನದಲ್ಲಿ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ 979ಕ್ಕೇರಿದೆ. ದಿನದಲ್ಲಿ 77 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಪಾಸಿಟಿವ್ ಬಂದ 340 ಮಂದಿಯಲ್ಲಿ 176 ಮಂದಿ ಪುರುಷರಾದರೆ 164 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 262 ಮಂದಿ ಉಡುಪಿ ತಾಲೂಕಿಗೆ ಸೇರಿದವರಾದರೆ ಕುಂದಾಪುರ ತಾಲೂಕಿನ 29 ಮಂದಿ ಹಾಗೂ ಕಾರ್ಕಳ ತಾಲೂಕಿನ 49 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.
ಇಂದು ಪಾಸಿಟಿವ್ ಬಂದ 340 ಮಂದಿಯಲ್ಲಿ 52 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೂ, ನಾಲ್ವರನ್ನು ಕೋವಿಡ್ ಆಸ್ಪತ್ರೆಗೂ, ಐವರನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿದ್ದು, ಉಳಿದ 279 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ 77 ಮಂದಿ ರೋಗದಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಜಿಲ್ಲೆಯಲ್ಲಿ ಜ.1ರಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 192ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ ಉಡುಪಿ ತಾಲೂಕಿನಲ್ಲಿ 5373 ಮಂದಿ, ಕುಂದಾಪುರದಲ್ಲಿ 1530 ಹಾಗೂ ಕಾರ್ಕಳ ತಾಲೂಕಿನ 1916 ಮಂದಿ ಸೇರಿದಂತೆ ಒಟ್ಟು 8819 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 1023 ಕ್ಕೇರಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
67 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 67 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 20 ಮಂದಿ ಮೊದಲ ಡೋಸ್ ಹಾಗೂ 47 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.
ಇಂದು ಲಸಿಕೆ ಪಡೆದವರಲ್ಲಿ 15ರಿಂದ 18 ವರ್ಷದ ಯಾವುದೇ ವಿದ್ಯಾರ್ಥಿ ಸೇರಿಲ್ಲ. 18 ವರ್ಷದಿಂದ 44 ವರ್ಷದೊಳಗಿನ 49 ಮಂದಿ ಹಾಗೂ 45 ವರ್ಷ ಮೇಲಿನ 18 ಮಂದಿ ಲಸಿಕೆ ಪಡೆದಿದ್ದಾರೆ.







