ಹಜ್ ಯಾತ್ರೆ: ರಾಷ್ಟ್ರಾದ್ಯಂತ ತರಬೇತಿ ಕಾರ್ಯಾಗಾರ

ಬೆಂಗಳೂರು, ಜ.9: ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ತರಬೇತಿದಾರರಿಗೆ ತರಬೇತಿ, ಮಾರ್ಗದರ್ಶನ ನೀಡುವ ಕಾರ್ಯಾಗಾರ ಮುಂಬೈನಲ್ಲಿ ರವಿವಾರ ಜರುಗಿತು.
ಕೇಂದ್ರ ಸರಕಾರದ ಹಜ್ ಕಮಿಟಿ ಆಫ್ ಇಂಡಿಯಾ ಸಹಯೋಗದೊಂದಿಗೆ ಮುಂಬೈನಲ್ಲಿ ನಡೆದ ಈ ಎರಡು ದಿನದ ಕಾರ್ಯಾಗಾರವನ್ನು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಉದ್ಘಾಟಿಸಿದರು.
ಕೋವಿಡ್ ಪರಿಣಾಮದಿಂದಾಗಿ ಕಳೆದ ಎರಡು ವರ್ಷಗಳಿಂದ ಪವಿತ್ರ ಹಜ್ ಯಾತ್ರೆ ಕೈಗೊಂಡಿಲ್ಲ. ಆದರೆ, ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ಹಜ್ ಯಾತ್ರೆ ನಡೆಯುವ ವಿಶ್ವಾಸವಿದ್ದು, ಈ ಸಂಬಂಧ ತರಬೇತಿದಾರರಿಗೆ ತರಬೇತಿ, ಮಾರ್ಗದರ್ಶನ ನೀಡುವ ಕಾರ್ಯಾಗಾರ ಇದಾಗಿತ್ತು.
ಮುಂಬೈನಲ್ಲಿ 600 ಮಂದಿಗೆ ತರಬೇತಿ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಮಹಾನಗರದಲ್ಲಿ ಕೋವಿಡ್ ಉಲ್ಬಣ ಹಿನ್ನೆಲೆ ಮಾರ್ಗಸೂಚಿ ಪಾಲನೆಯೊಂದಿಗೆ 150 ಮಂದಿಗೆ ತರಬೇತಿದಾರರು ಪಾಲ್ಗೊಂಡಿದ್ದರು. ಸದ್ಯ ಅವರಿಗೆ ತರಬೇತಿ, ಹೊಸ ವಿಧಾನದ ಕುರಿತು ಮಾಹಿತಿ ನೀಡಲಾಗಿದ್ದು, ಇತರರಿಗೂ ಅವರು ಹಂಚಿಕೊಳ್ಳಲು ಸೂಚನೆ ನೀಡಲಾಗಿದೆ.
ಪ್ರಸ್ತುತ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವವರಿಗೆ ಕೋವಿಡ್ ಲಸಿಕೆ ಪ್ರಮಾಣ ಪತ್ರ, ಹೊಸ ಆ್ಯಪ್ ಬಳಕೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಇದರಿಂದ ಅವರು ಹೆಚ್ಚಿನ ವಿಚಾರ, ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದಾಗಿದೆ.
ಈ ಬಾರಿಗೆ ಎಷ್ಟು ಕೋಟಾ ದೊರೆಯಲಿದೆ ಎನ್ನುವ ಮಾಹಿತಿ ತಿಳಿದುಬಂದಿಲ್ಲ. ಆದರೆ, ಕೇಂದ್ರ ಸರಕಾರವೂ ಸೌದಿ ಸರಕಾರದ ಜೊತೆ ಸಂಪರ್ಕ ಸಾಧಿಸಿ ಭಾರತೀಯರಿಗೆ ಹಜ್ ಯಾತ್ರೆಗೆ ಅನುವು ಮಾಡಿಕೊಡುವ ವಿಶ್ವಾಸವನ್ನು ಕಾರ್ಯಾಗಾರದಲ್ಲಿ ವ್ಯಕ್ತಪಡಿಸಲಾಯಿತು.
ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಈ ವರ್ಷ ಮಕ್ಕಾ ನಗರದ ಅಝೀಜಿಯಾ ಕ್ಷೇತ್ರದಲ್ಲಿ ಮಾತ್ರ ವಸತಿ ಸೌಲಭ್ಯ ದೊರೆಯಲಿದೆ. ನೂತನ ತಂತ್ರಜ್ಞಾನ, ವಾಟ್ಸ್ ಆ್ಯಪ್ ಮೂಲಕ ಯಾತ್ರಿಗಳಿಗೆ ಹಲವು ಮಾಹಿತಿ ಹಂಚಿಕೊಳ್ಳುವ ಉದ್ದೇಶವನ್ನು ಇಲಾಖೆ ಹೊಂದಿದೆ ಎಂದು ನುಡಿದರು.
ಪ್ರಮುಖವಾಗಿ ಈ ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯದಿಂದ ಮೊದಲ ಬಾರಿಗೆ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ ವೀಕ್ಷಕರಾಗಿ ಪಾಲ್ಗೊಂಡಿದ್ದರು. ಅದೇ ರೀತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ನೋಡಲ್ ಅಧಿಕಾರಿ ಸೈಯದ್ ಎಝಾಝ್ ಅಹ್ಮದ್ ಭಾಗಿಯಾಗಿ, ವಿಷಯ ಮಂಡಿಸಿದರು.
ಕಾರ್ಯಾಗಾರದಲ್ಲಿ ಔರಾಂಗಬಾದಿನ ಮೌಲಾನ ಮುಹಮ್ಮದ್ ನಸೀಬುದ್ದಿನ್ ಮಿಫಾತಿ, ಹಜ್ ಕಮಿಟಿ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮುಹಮ್ಮದ್ ಯಕೂಬ್ ಎಸ್., ಹಿರಿಯ ಐಪಿಎಸ್ ಅಧಿಕಾರಿ ಖ್ವೈಸ್ಸಾರ್ ಖಾಲಿದ್, ಮುಂಬೈ ಆರ್‍ಪಿಎಫ್ ಡಿಐಜಿ ಕೆ.ಕೆ.ಅಶ್ರಾಫ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.







