ಹೆಣ್ಣಿನ ಹೋರಾಟ ಇತಿಹಾಸದಲ್ಲಿ ಮರೆಮಾಚಿದೆ: ಡಾ. ಎಂ.ಎಸ್.ಆಶಾದೇವಿ

ಬೆಂಗಳೂರು, ಜ.9: ದೇಶದ ಇತಿಹಾಸದಲ್ಲಿ ಹೆಣ್ಣಿನ ಹೋರಾಟಗಳು ಕಳೆದ ಎರಡು ವರ್ಷಗಳಿಂದ ಮೂರ್ತವಾಗಿ ಕಂಡರೂ, ಅದಕ್ಕೂ ಹಿಂದಿನಿಂದ ಹೆಣ್ಣಿನಲ್ಲಿ ಬಂಡಾಯ ಇದೆ. ಆದರೆ ಇತಿಹಾಸದಲ್ಲಿ ಮರೆಮಾಚಿದೆ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರದಂದು ಫಾತಿಮಾ ಶೇಖ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಫಾತೀಮಾ ಶೇಖ್ ಕೃತಿ ಬಿಡುಗಡೆಯ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಹೆಣ್ಣಿನ ಹೋರಾಟಗಳು ಒಂದಕ್ಕೊಂದು ಹೆಣೆದುಕೊಂಡಿದೆ. ಹೆಣ್ಣು ಮಕ್ಕಳಿಗೆ ಅಭಿವ್ಯಕ್ತಪಡಿಸಲು ಶಿಕ್ಷಣವು ಜಾಗವನ್ನು ಕೊಡುತ್ತದೆ. ಪ್ರಸ್ತತ ಸಮಾಜದಲ್ಲಿ ಹೆಣ್ಣಿನ ಹೋರಾಟ ತನ್ನ ಜಾಗವನ್ನು ಹುಡುಕಿಕೊಳ್ಳುತ್ತಿದೆ. ಹೆಣ್ಣಿನ ಪ್ರತಿಕ್ರಿಯೆ ಒಂದು ಚಳುವಳಿಯಾಗಿದ್ದು, ಇತಿಹಾಸದಲ್ಲಿ ಹೆಣ್ಣಿನ ಹೋರಾಟಗಳು ಮರೆಯಾಗಿದೆ. ಹಾಗಾಗಿ, ದೇಶದ ಕೋಮುವಾದಿ ಸಮಾಜವನ್ನು ನೆಲಸಮಗೊಳಿಸಲು ಹೆಣ್ಣು ಮುಂದಾಳತ್ವ ವಹಿಸಬೇಕು ಎಂದು ಗಾಂಧೀ ಹೇಳಿದ್ದಾರೆ ಎಂದು ನೆನೆಪಿಸಿಕೊಂಡರು.
ಹೆಣ್ಣಿನ ಹೋರಾಟವು ಭಾರತದ ದಲಿತರ ಹೋರಾಟಕ್ಕಿಂತ ಭಿನ್ನವಲ್ಲ. ಭಾರತದಲ್ಲಿ ದಲಿತ ಹೋರಾಟಕ್ಕೆ ಇರುವಂತೆ ಹೆಣ್ಣಿನ ಹೋರಾಟಕ್ಕೂ ಒಡುಕು ಇದೆ. ಆದರೆ ಸೋದರಿ ಸಮುದಾಯವೇ ಶಕ್ತಿಶಾಲಿ ಎಂಬಂತೆ, ನಿಜವಾದ ಒಗ್ಗಟ್ಟು ಹೆಣ್ಣಿನಲ್ಲಿ ಇರುತ್ತದೆ. ಹೆಣ್ಣಿನಲ್ಲಿ ಬಿನ್ನಾಭಿಪ್ರಾಯಗಳು ಇದ್ದರೂ, ಹೋರಾಟಕ್ಕೆ ದೇಶ, ಕಾಲ, ಭಾಷೆ ಅಂಗಿಲ್ಲದೆ, ಹೆಣ್ಣು ಒಂದಾಗುತ್ತಾಳೆ ಎಂದ ಅವರು, ಅರಿವು ನಮ್ಮನ್ನು ಮುಟ್ಟಿದರೆ, ಯಾರು ತಡೆಯಲು ಸಾಧ್ಯವಿಲ್ಲ. ಶಿಕ್ಷಣ ಅರಿವನ್ನು ನೀಡುತ್ತದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಡಾ.ಎಲ್. ಹನುಮಂತಯ್ಯ ಮಾತನಾಡಿ, ನಮ್ಮ ಚರಿತ್ರೆಯು ಹುದುಗಿಟ್ಟ ಚರಿತ್ರೆಯಾಗಿದೆ. ಹಾಗಾಗಿ ಸಾವಿತ್ರಿಬಾಯಿ ಪುಲೆ, ಪಾತಿಮಾ ಶೇಖ್‍ರಂತಹ ಶಿಕ್ಷಕಿಯರು ಕೇವಲ ಮೈಲುಗಲ್ಲಾಗಿದ್ದಾರೆ. ರಾಜ ಪರಂಪರೆಯನ್ನು ಬಿಂಬಿಸುವ ಬದಲು ಸಾಮಾನ್ಯರ ಚಿರಿತ್ರೆಯನ್ನು ನಮ್ಮ ಇತಿಹಾಸದಲ್ಲಿ ಉಲ್ಲೇಖಿಸಿದ್ದರೆ, ಇಂತಹ ಮೈಲಿಗಲ್ಲುಗಳು ಸಾಕಷ್ಟು ಕಾಣ ಸಿಗುತ್ತಿದ್ದವು. ಇತಹಾಸದಲ್ಲಿ ಹುದುಗಿರುವ ಇಂತಹವರನ್ನು ಹೊರತರುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಪ್ರಸ್ತುತ ಸನ್ನಿವೇಶದಲ್ಲಿ ಚರಿತ್ರೆಯನ್ನು ನಾವು ಪುನರ್ ಮನನ ಮಾಡಿಕೊಳ್ಳಬೇಕಾಗಿದೆ. ಘಜ್ನಿ, ಘೋರಿ ದಾಳಿ ಮಾಡಿದಾಗ, ದೇಶದ 500 ಸಂಸ್ಥಾನಗಳಲ್ಲಿ ಒಡುಕು ಹೆಚ್ಚಾಗಿತ್ತು. ಆದರೆ, ದಾಳೀಯ ಬಗ್ಗೆ ಚರಿತ್ರೆಗಳು ಮಾತನಾಡುತ್ತವೆ, ಹೊರತು, ಒಡಕಿನ ಬಗ್ಗೆ ಮಾತನಾಡುವುದಿಲ್ಲ ಎಂಬುದೇ ವಿಪರ್ಯಾಸ ಎಂದ ಅವರು, ಸಾವಿರಾರು ಮಕ್ಕಳಿಗೆ ಅಕ್ಷರ ಕಲಿಸಿಕೊಡುವುದರ ಹಿಂದೆ ಹೋರಾಟ ಇರುತ್ತದೆ ಎಂದು ಪಾತಿಮಾ ಶೇಖ್‍ರ ಜೀವನವನ್ನು ನೆನೆಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಬರಹಗಾರ ಸೈಯದ್ ನಾಸಿರ್ ಅಹಮ್ಮದ್, ಅನುವಾದಕ ಕಾ.ಹು. ಚಾನ್ ಪಾಷ, ಸಾಹಿತಿ ವಸುಂಧರ ಭೂಪತಿ, ವಕೀಲೆ ಮೈತ್ರೇಯಿ ಉಪಸ್ಥಿತರಿದ್ದರು







