ಉಡುಪಿ ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ: ಪ್ರಯಾಣಿಕರ ಅಭಾವದಿಂದ ರಸ್ತೆಗಿಳಿಯದ ಶೇ.70ರಷ್ಟು ಬಸ್‌ಗಳು !

ಉಡುಪಿ, ಜ.9: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಉಡುಪಿ ಜಿಲ್ಲೆಯಾದ್ಯಂತ ಜನ ಹಾಗೂ ವಾಹನ ಸಂಚಾರ ಬಹಳಷ್ಟು ವಿರಳವಾಗಿರುವುದು ಕಂಡುಬಂತು.
ಬಸ್‌ಗಳ ಸಂಚಾರಕ್ಕೆ ಅವಕಾಶ ಇದ್ದರೂ ಪ್ರಯಾಣಿಕರ ಅಭಾವದ ಹಿನ್ನೆಲೆ ಯಲ್ಲಿ ಶೇ.30ರಷ್ಟು ಖಾಸಗಿ ಹಾಗೂ ಸಿಟಿ ಬಸ್‌ಗಳು ಮಾತ್ರ ಓಡಾಟ ನಡೆಸಿದವು. ಉಳಿದಂತೆ ಹೆಚ್ಚಿನ ಬಸ್‌ಗಳು ನಿಲ್ದಾಣಗಳಲ್ಲಿಯೇ ಉಳಿದುಕೊಂಡವು. ಅದೇ ರೀತಿ ಕೆಲವು ಮಾರ್ಗಗಳಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಓಡಾಟ ನಡೆಸಿಲ್ಲ ಎಂದು ತಿಳಿದುಬಂದಿದೆ.
ತರಕಾರಿ, ಹಣ್ಣು, ದಿನಸಿ, ಸೂಪರ್ ಮಾರ್ಕೆಟ್, ಬೇಕರಿ, ಹೂವುವಿನ ಅಂಗಡಿಗಳು, ಪೆಟ್ರೋಲ್ ಬಂಕ್, ಮೆಡಿಕಲ್ ಹೊರತು ಪಡಿಸಿ ಉಳಿದ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ವ್ಯಾಪಾರ ಇಲ್ಲದ ಕಾರಣ ಹೆಚ್ಚಿನ ಹೊಟೇಲ್ ಗಳು ಇಂದು ಸಂಪೂರ್ಣ ಬಂದ್ ಮಾಡಿರುವುದು ಕಂಡುಬಂತು.
ರವಿವಾರದ ಸಂತೆಕಟ್ಟೆ ಸಂತೆಯನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರೂ ಕೂಡ ತರಕಾರಿ ವ್ಯಾಪಾರಿಗಳು ಸಂತೆ ಮಾರುಕಟ್ಟೆಯ ಹೊರಗಡೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಿದರು. ಸ್ಥಳೀಯರು ಆಗಮಿಸಿ ತರಕಾರಿಗಳನ್ನು ಖರೀದಿಸುತ್ತಿ ರುವ ದೃಶ್ಯಗಳು ಕಂಡುಬಂದವು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಕಲ್ಸಂಕ, ಮಣಿಪಾಲ, ಕುಂದಾ ಪುರ, ಕಾರ್ಕಳಗಳಲ್ಲಿನ ಚೆಕ್‌ಪೋಸ್ಟ್ ಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಗಳು ಗಸ್ತು ತಿರುಗಿ ಭದ್ರತೆಯ ಪರಿಶೀಲನೆ ನಡೆಸಿದರು.








