ಕೊರೋನಾ ಸೋಂಕು ಹೆಚ್ಚಳ: ರಾತ್ರಿ, ವಾರಾಂತ್ಯ ಕರ್ಫ್ಯೂ ಪರಿಹಾರವಲ್ಲ: ಸಿಪಿಎಂ

ಫೈಲ್ ಚಿತ್ರ
ಬೆಂಗಳೂರು, ಜ.9: ಕಳೆದೆರಡು ಕೋವಿಡ್ ಅಲೆಗಳಿಂದ ರಾಜ್ಯದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದವರು ಕೆಲಸ ಕಳೆದುಕೊಂಡು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕೋವಿಡ್ ಉಲ್ಬಣವಾಗುತ್ತಿದ್ದು, ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಪರಿಹಾರವಲ್ಲ. ಸರಕಾರವು ಜನರ ಯೋಗಕ್ಷೇಮಕ್ಕಾಗಿ ಕ್ರಮ ವಹಿಸಬೇಕು ಎಂದು ಸಿಪಿಎಂನ ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಆಗ್ರಹಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ಸಂಕಷ್ಟದಲ್ಲಿರುವಾಗಲೇ ರಾಜ್ಯದ ಬಹುತೇಕ ದುಡಿಯುವ ಜನತೆಯ ಕಸುಬುಗಳನ್ನು ದೋಚುವ ದುಷ್ಕೃತ್ಯವನ್ನು ರಾಜ್ಯ ಸರಕಾರ ಕೈಗೊಂಡಿದೆ. ಕೋವಿಡ್-19 ಮೂರನೇ ಅಲೆಯ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ರಾತ್ರಿ ಹಾಗೂ ವಾರಾಂತ್ಯ ಕಫ್ರ್ಯೂ ವಿಧಿಸುವ ಕ್ರಮಗಳು ಮಾತ್ರವೇ ಕೋವಿಡ್ ಸಾಂಕ್ರಾಮಿಕ ಹರಡದಂತೆ ತಡೆಯುತ್ತದೆ ಎಂಬ ಸರಕಾರದ ನಿರ್ಣಯ ಸರಿಯಲ್ಲ. ಇದರಿಂದ ಮಧ್ಯಮ ವರ್ಗದ ಕುಟುಂಬಗಳು ಬೀದಿಪಾಲಾಗುತ್ತವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ರಾಜ್ಯದಲ್ಲಿ ಕೊರೋನ ಎರಡನೆ ಅಲೆ ಸಂಭವಿಸಿದ್ದಾಗ, ಆಸ್ಪತ್ರೆ ಬೆಡ್ಗಳನ್ನು, ಆಮ್ಲಜನಕ, ಲಸಿಕೆ, ರೆಮ್ಡಿಸಿವರ್ ಔಷಧಿಗಳು ದೊರೆಯದಂತೆ, ಕೃತಕವಾಗಿ ಅಭಾವ ಉಂಟು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಯಿತು. ಇದಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ಇಂತಹ ಅಕ್ರಮ ದಂಧೆಗಳು ನಡೆಯದಂತೆ ನಿಗಾ ವಹಿಸಬೇಕು ಮತ್ತು ವಾರ್ ರೂಂಗಳನ್ನು ಸ್ಥಾಪಿಸಿ ಪ್ರಕರಣಗಳಿಗನುಸಾರ ಶುಶ್ರೂಷೆ ದೊರೆಯುವಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕೋವಿಡ್ ವಾರಿಯರ್ಸ್ ಆಗಿ ದುಡಿಯುವ ಆಸ್ಪತ್ರೆ, ಮುನ್ಸಿಪಲ್ ಹಾಗೂ ಪಂಚಾಯತ್ ಕಾರ್ಮಿಕರು ಸೇರಿದಂತೆ ಮಸಣ ಕಾರ್ಮಿಕರಿಗೂ ವಿಮಾ ಯೋಜನೆಯನ್ನು ವಿಸ್ತರಿಸಿ ರಕ್ಷಣೆಗೆ ಕ್ರಮವಹಿಸಬೇಕು. ಹಳೆಯ ಪ್ರಕರಣಗಳನ್ನು ಈಗಲಾದರೂ ತನಿಖೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.







