ಧಾರವಾಡ: ಹಳಿ ತಪ್ಪಿದ ಗೂಡ್ಸ್ ರೈಲು; ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಸಾಂದರ್ಭಿಕ ಚಿತ್ರ
ಧಾರವಾಡ, ಜ.9: ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣದಲ್ಲಿ ರವಿವಾರ ಬೆಳಗಾವಿ ಕಡೆಗೆ ಹೊರಟಿದ್ದ ಸರಕು ಸಾಗಣೆ ರೈಲು ಹಳಿತಪ್ಪಿದ್ದು, 500 ಮೀಟರ್ ವರೆಗಿನ ರೈಲು ಮಾರ್ಗ ಕಿತ್ತು ಹೋಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಸರಕು ತುಂಬಿದ ರೈಲು ಅಳ್ನಾವರ ರೈಲು ನಿಲ್ದಾಣದ ಐದನೆ ಮಾರ್ಗದಲ್ಲಿ ಚಲಿಸುವಾಗ ಒಂದು ಬೋಗಿ ಮಾತ್ರ ಹಳಿ ಬಿಟ್ಟು ಕೆಳಗಿಳಿದು ಸುಮಾರು ಅರ್ಧ ಕಿಮೀ ವರೆಗೆ ಚಲಿಸಿದೆ.
ಇದರಿಂದ, ಹಳಿಯ ಸ್ಲೀಪರ್ ಗಳು ಪುಡಿಯಾಗಿವೆ. ಘಟನೆ ಜರುಗಿದ ಸ್ಥಳದಲ್ಲಿ ಕೆಳರಸ್ತೆಯ ಸೇತುವೆಯಿದ್ದು ಬೋಗಿಯು ರಸ್ತೆಗೆ ಉರುಳಿದ್ದರೆ ಜೀವಹಾನಿ ಸಂಭವಿಸುವ ಸಾಧ್ಯತೆಯಿತ್ತು. ಜತೆಗೆ ಹಳಿಗೆ ಹೊಂದಿಕೊಂಡಂತೆ ಇರುವ ರೈಲ್ವೆ ವಿದ್ಯುತ್ ಮಾರ್ಗದ ಕಂಬಗಳಿಗೂ ಹಾನಿಯಾಗುತ್ತಿತ್ತು.
ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಬ್ಬಂದಿಗಳು ದುರಸ್ತಿ ಕಾರ್ಯ ಕೈಗೆತ್ತಿಕೊಂಡು ರೈಲು ಓಡಾಟಕ್ಕೆ ಅನುವು ಮಾಡಿಕೊಟ್ಟರು.
Next Story





