ಸಂಶೋಧನೆ ಸಮಾಜಮುಖಿಯಾಗದೆ ಇದ್ದರೆ ವ್ಯರ್ಥ: ಪ್ರೊ.ಎಂ.ಜಿ. ಈಶ್ವರಪ್ಪ
ಬೆಂಗಳೂರು, ಜ.9: ಸಂಶೋಧನೆಗೂ ಸಾಮಾಜಿಕ ಕಳಕಳಿಗೂ ಸಂಬಂಧ ಇರಬೇಕು. ಸಂಶೋಧನೆ ಸಮಾಜಮುಖಿಯಾಗದೆ ಇದ್ದರೆ ವ್ಯರ್ಥವಾಗುತ್ತದೆ ಎಂದು ಚಿಂತಕ ಪ್ರೊ.ಎಂ.ಜಿ. ಈಶ್ವರಪ್ಪ ಆಭಿಪ್ರಾಯ ಪಟ್ಟರು.
ರವಿವಾರ ಭೂಮಿ ಬುಕ್ಸ್ ಹಾಗೂ ಭಾರತೀಯ ವಿದ್ಯಾಭವನ ಭವನ್ಸ್ ಗಾಂಧೀ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಡೇಟಾ ದೇವರು ಬಂದಾಯ್ತು, ಬೆಲ್ಲಂಪುಲ್ಲಕ್ಕ ಹಾಗೂ ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ ಪುಸ್ತಕಗಳ ಲೋಕಾರ್ಪಣಾ ಆನ್‍ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನದ ಸಂಶೋಧನೆಗಳು ಸಮಾಜಮುಖಿಯಾಗಿರಬೇಕು. ಯುರೋಪಿಯನ್ ಸಿನೆಮಾಗಳು ತಂತ್ರಜ್ಞಾನದ ವಿಕೃತ ರೂಪದ ನಿದರ್ಶನಗಳಾಗಿದೆ. ಹಾಗಾಗಿ ತಂತ್ರಜ್ಞಾನದ ಕುರಿತು ಗಾಬರಿಯಾಗಿದೆ. ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಎಪ್ಪತ್ತರ ದಶಕದಲ್ಲಿ ವಿಜ್ಞಾನ ಬರವಣಿಗೆಗಳನ್ನು ಬರೆಯುವುದು ಸವಾಲಿನ ಕೆಲಸವಾಗಿತ್ತು. ಇಂದು ಅದರ ಕುರಿತು ವಿಚಾರ ಮಾಡುವುದು ಅಗತ್ಯವಾಗಿದೆ ಎಂದರು.
ವಿಜ್ಞಾನಕ್ಕೆ ವಿವೇಕ ಇರಬೇಕು ಎಂದು ಸಾಮಾನ್ಯರು ಹೇಳಿದರೆ, ವಿಜ್ಞಾನದ ಬಳಕೆಯಲ್ಲಿ ವಿವೇಕ ಇರಬೇಕು ಎಂದು ಅಂಕಣಕಾರ ನಾಗೇಶ ಹೆಗಡೆ ಹೇಳುತ್ತಾರೆ. ಇದಕ್ಕೆ ವಿಜ್ಞಾನ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿದ ಅವರ ಲೇಖನಗಳೇ ಸಾಕ್ಷಿಯಾಗಿದ್ದು, ಪ್ರಪಂಚದ ಎಲ್ಲಾ ಆಧುನಿಕ ಸಂಶೋಧನೆಗಳನ್ನು ಸರಳವಾಗಿ ವಿವರಿಸಬಲ್ಲರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಚಿರಂಜೀವಿ ಸಿಂಗ್, ಕೆ.ಎನ್. ಗಣೇಶಯ್ಯ, ಆರ್. ಪೂರ್ಣಿಮಾ, ನಾಗೇಶ ಹೆಗಡೆ, ಮಲ್ಲಿಕಾರ್ಜುನ ಹೊಸಪಾಳ್ಯ, ಗುರುರಾಜ್ ಎಸ್. ದಾವಣಗೆರೆ ಭಾಗಿಯಾಗಿದ್ದರು.







