ಗುಜರಾತ್: 10 ಸಿಬ್ಬಂದಿ ಸಹಿತ ಪಾಕ್ ದೋಣಿ ಐಸಿಜಿ ವಶಕ್ಕೆ
ಅಹ್ಮದಾಬಾದ್, ಜ.9: ಗುಜರಾತ್ ಕರಾವಳಿಯಾಚೆ ಭಾರತೀಯ ಜಲಪ್ರದೇಶದಲ್ಲಿ 10 ಸಿಬ್ಬಂದಿಗಳ ಸಹಿತ ಪಾಕಿಸ್ತಾನದ ದೋಣಿಯೊಂದನ್ನು ಭಾರತೀಯ ತಟ ರಕ್ಷಣಾ ಪಡೆ (ಐಸಿಜಿ)ಯು ವಶಪಡಿಸಿಕೊಂಡಿದೆ.
ಶನಿವಾರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಐಸಿಜಿಯ ‘ಅಂಕಿತ್’ ನೌಕೆಯು ‘ಯಾಸ್ಮೀನ್’ಹೆಸರಿನ ಪಾಕ್ ದೋಣಿಯನ್ನು ಬೆನ್ನಟ್ಟಿ ವಶಪಡಿಸಿಕೊಂಡಿದ್ದು,ಅದನ್ನು ಮುಂದಿನ ವಿಚಾರಣೆಗಾಗಿ ಪೋರಬಂದರಿಗೆ ತರಲಾಗಿದೆ ಎಂದು ಐಸಿಜಿ ಅಧಿಕಾರಿಯೋರ್ವರು ಟ್ವೀಟಿಸಿದ್ದಾರೆ.
ದೋಣಿಯಲ್ಲಿದ್ದ 2,000 ಕೆ.ಜಿ.ಮೀನು ಮತ್ತು 600 ಲೀ.ಇಂಧನವನ್ನು ಐಸಿಜಿ ವಶಪಡಿಸಿಕೊಂಡಿದೆ. ಪಾಕ್ ಸಿಬ್ಬಂದಿಗಳ ಬಳಿ ಯಾವುದೇ ದಾಖಲೆಗಳಿರಲಿಲ್ಲ ಎಂದು ವರದಿಯು ತಿಳಿಸಿದೆ.
ಭಾರತೀಯ ಜಲಪ್ರದೇಶದಲ್ಲಿ ಅಕ್ರಮವಾಗಿ ಸಂಚರಿಸುವ ಪಾಕ್ ದೋಣಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಇದೇ ಮೊದಲ ಸಲವೇನಲ್ಲ.
ಕಳೆದ ತಿಂಗಳು ಗುಜರಾತ್ ಎಟಿಎಸ್ನೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ 400 ಕೋ.ರೂ ಮೌಲ್ಯದ 77 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ ಪಾಕ್ ಮೀನುಗಾರಿಕೆ ದೋಣಿಯನ್ನು ಭಾರತೀಯ ಜಲಪ್ರದೇಶವನ್ನು ಪ್ರವೇಶಿಸುತ್ತಿದ್ದಾಗ ಆರು ಸಿಬ್ಬಂದಿಗಳ ಸಹಿತ ಐಜಿಸಿ ವಶಪಡಿಸಿಕೊಂಡಿತ್ತು.





