ಮಧ್ಯಪ್ರದೇಶ: ಕೂದಲು, ಮೀಸೆ ಕತ್ತರಿಸಿಕೊಳ್ಳಲು ನಿರಾಕರಿಸಿದ ಕಾನ್ ಸ್ಟೇಬಲ್ ಅಮಾನತು

ಭೋಪಾಲ, ಜ. 9: ಕೂದಲು ಹಾಗೂ ಅಸಂಬದ್ದ ವಿನ್ಯಾಸದಲ್ಲಿರುವ ಮೀಸೆ ಕತ್ತರಿಸಿಕೊಳ್ಳಲು ನಿರಾಕರಿಸಿದ ಮಧ್ಯಪ್ರದೇಶದ ಪೊಲೀಸ್ ಕಾನ್ ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ.
ಕಾನ್ ಸ್ಟೇಬಲ್ ರಾಕೇಶ್ ರಾಣಾ ಅವರನ್ನು ರಾಜ್ಯ ಪೊಲೀಸ್ ನ ಸಾಗಾಟ ಘಟಕಕ್ಕೆ ಚಾಲಕನನ್ನಾಗಿ ನೇಮಕ ಮಾಡಲಾಗಿತ್ತು. ಅವರಿಗೆ ಮೀಸೆ ಕತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ, ಅವರು ಆದೇಶ ಪಾಲಿಸಲು ವಿಫಲರಾಗಿದ್ದರು.
ಅನಂತರ ಅವರನ್ನು ಕೂಡಲೇ ಬರುವಂತೆ ಅಮಾನತುಗೊಳಿಸಲಾಗಿದೆ. ರಾಣಾ ಅವರ ಮೀಸೆ ಇತರ ಉದ್ಯೋಗಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುತ್ತದೆ ಎಂದು ಆದೇಶ ಹೇಳಿದೆ. ಆದರೆ, ಮೀಸೆ ಸ್ವಗೌರವದ ವಿಷಯ ಎಂದು ಪ್ರತಿಪಾದಿಸಿರುವ ರಾಣಾ, ಮೀಸೆ ಕತ್ತರಿಸಲು ನಿರಾಕರಿಸಿದ್ದಾರೆ. ‘‘ನಾನು ರಜಪೂತ ಹಾಗೂ ನನ್ನ ಮೀಸೆ ನನಗೆ ಹೆಮ್ಮೆ’’ ಎಂದು ಅವರು ಹೇಳಿದ್ದಾರೆ.
ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸದೇ ಇರುವ ಕಾರಣಕ್ಕೆ ರಾಣಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಐಜಿ ಪ್ರಶಾಂತ್ ಶರ್ಮಾ ತನ್ನ ಆದೇಶದಲ್ಲಿ ಹೇಳಿದ್ದಾರೆ.
Next Story





