ತಾಲಿಬಾನ್ ಆಡಳಿತವನ್ನು ಟೀಕಿಸಿದ ಕಾಬೂಲ್ ವಿವಿ ಪ್ರೊಫೆಸರ್ ಬಂಧನ
ಕಾಬೂಲ್: ತಾಲಿಬಾನ್ ನಾಯಕತ್ವ ಬಗ್ಗೆ ನಿಷ್ಟುರವಾಗಿ ಟೀಕಿಸುತ್ತಿರುವ
ಅಫ್ಗಾನ್ ವಿವಿಯ ಪ್ರಸಿದ್ಧ ಪ್ರೊಫೆಸರ್ ಫೈಝುಲ್ಲಾ ಜಲಾಲ್ ರನ್ನು ಕಾಬೂಲ್ ನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.
ಕಾಬೂಲ್ ವಿವಿಯಲ್ಲಿ ಕಾನೂನು ಮತ್ತು ರಾಜಕೀಯ ವಿಜ್ಞಾನದ ಪ್ರೊಫೆಸರ್ ಆಗಿರುವ ಜಲಾಲ್, ಮಾಧ್ಯಮಗಳಿಗೆ, ಟಿವಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ನಾಯಕತ್ವದ ಬಗ್ಗೆ ಟೀಕಿಸಿದ್ದರು. ದೇಶದ ಆಡಳಿತವನ್ನು ಬಲಾತ್ಕಾರದಿಂದ ಕೈವಶ ಮಾಡಿಕೊಂಡಿರುವ ತಾಲಿಬಾನ್ ಆಡಳಿತದಿಂದ ಅರ್ಥವ್ಯವಸ್ಥೆ ಹದಗೆಟ್ಟಿದ್ದು ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದೆ ಎಂದು ವಿಮರ್ಶಿಸಿದ್ದರು.
ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಮುಹಮ್ಮದ್ ನಸೀಮಾರನ್ನು ‘ಕರು’ ಎಂದು ಉಲ್ಲೇಖಿಸಿದ್ದು ಈ ಪದ ಬಳಕೆ ಅಫ್ಗಾನಿಸ್ತಾನದಲ್ಲಿ ಅವಮಾನಕರ ಎಂದು ಭಾವಿಸಲಾಗಿದೆ. ಜಲಾಲ್ ಅವರ ಸಂದರ್ಶನದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಶನಿವಾರ ಜಲಾಲ್ ರನ್ನು ತಾಲಿಬಾನ್ನ ಗುಪ್ತಚರ ಇಲಾಖೆ ಬಂಧಿಸಿದೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ದೃಢಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನೀಡಿರುವ ಹೇಳಿಕೆ ವ್ಯವಸ್ಥೆಯ ವಿರುದ್ಧ ಜನರನ್ನು ಪ್ರಚೋದಿಸುವ ಪ್ರಯತ್ನವಾಗಿದೆ ಮತ್ತು ಜನರ ಘನತೆಯ ವಿರುದ್ಧ ಅವರು ಆಟವಾಡುತ್ತಿದ್ದಾರೆ . ಪ್ರಾಧ್ಯಾಪಕರು ಅಥವಾ ವಿದ್ವಾಂಸರು ಎಂಬ ಹೆಸರಿನಲ್ಲಿ ಇತರರ ಘನತೆಗೆ ಧಕ್ಕೆ ತರುವ ಈ ರೀತಿಯ ಅರ್ಥಹೀನ ಟೀಕೆಗಳನ್ನು ಇತರರು ಮಾಡಬಾರದು ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದವರು ಹೇಳಿದ್ದಾರೆ.
ತಾಲಿಬಾನ್ ಗುಪ್ತಚರ ಮುಖ್ಯಸ್ಥ ಪಾಕಿಸ್ತಾನದ ಕೈಗೊಂಬೆ, ಅಫ್ಗಾನೀಯರು ಕತ್ತೆಗಳೆಂದು ತಾಲಿಬಾನ್ ಸರಕಾರ ಪರಿಗಣಿಸಿದೆ ಎಂಬ ಹೇಳಿಕೆಯನ್ನು ಜಲಾಲ್ ಟ್ವೀಟ್ ಮಾಡಿದ್ದಾರೆ ಎಂದಿರುವ ಮುಜಾಹಿದ್, ಇದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದ್ದಾರೆ. ಆದರೆ ಮುಜಾಹಿದ್ ಉಲ್ಲೇಖಿಸಿರುವ ಟ್ವಿಟರ್ ಖಾತೆ ನಕಲಿ, ಅದಕ್ಕೂ ಪ್ರೊಫೆಸರ್ ಜಲಾಲ್ ಗೂ ಸಂಬಂಧವಿಲ್ಲ ಎಂದು ಸ್ಥಳೀಯ ಮಾಧ್ಯಮ ಆಮಾಜ್ ನ್ಯೂಸ್ ವರದಿ ಮಾಡಿದೆ.







