ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶ ಪುರಾವೆ ಸಹಿತ ದೃಢಪಡಿಸಿದ ಚೀನಾದ ಗಗನನೌಕೆ

ಬೀಜಿಂಗ್, ಜ.10: ಚಂದ್ರನ ಮೇಲ್ಮೈಯಲ್ಲಿ ನೀರು ಇರುವುದನ್ನು ಚೀನಾದ ಚಾಂಗ್ಸ್ 5 ಅಂತರಿಕ್ಷ ನೌಕೆ ಸಾಕ್ಷ್ಯಾಧಾರ ಸಹಿತ ಪತ್ತೆ ಹಚ್ಚಿದ್ದು ಉಪಗ್ರಹದ ಶುಷ್ಕತೆಗೆ ಹೊಸ ಪುರಾವೆ ದಕ್ಕಿದಂತಾಗಿದೆ ಎಂದು ಪ್ರಮುಖ ವಿಜ್ಞಾನ ಪಾಕ್ಷಿಕದಲ್ಲಿ ಪ್ರಕಟವಾದ ವರದಿ ಹೇಳಿದೆ.
ಅಂತರಿಕ್ಷ ನೌಕೆ ಚಂದ್ರನ ಮೇಲೆ ಇಳಿದ ಪ್ರದೇಶದಲ್ಲಿ ಸಂಗ್ರಹಿಸಲಾದ ಮಣ್ಣಿನಲ್ಲಿ ಪ್ರತೀ ಟನ್ ನಲ್ಲಿ 120 ಗ್ರಾಮ್ ನಷ್ಟು ನೀರಿನ ಪ್ರಮಾಣ ಇರುವುದನ್ನು ಪತ್ತೆಹಚ್ಚಲಾಗಿದೆ ಮತ್ತು ಹಗುರವಾದ ಕಲ್ಲಿನಲ್ಲಿ ಈ ಪ್ರಮಾಣ 180 ಗ್ರಾಮ್ ನಷ್ಟಿದ್ದು ಇದು ಭೂಮಿಯಲ್ಲಿನ ಕಲ್ಲಿನಲ್ಲಿ ಕಂಡುಬರುವ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ಲೇಖನ ತಿಳಿಸಿದೆ. ಇದುವರೆಗೆ ಚಂದ್ರನಲ್ಲಿ ನೀರು ಇರುವುದನ್ನು ದೂರದಲ್ಲಿ ವೀಕ್ಷಿಸಿ ದೃಢಪಡಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಚೀನಾದ ಅಂತರಿಕ್ಷ ನೌಕೆ ಸ್ಥಳದಿಂದ ಸಂಗ್ರಹಿಸಿ ತಂದ ಮಾದರಿಯಿಂದ ಇದನ್ನು ಪುರಾವೆ ಸಹಿತ ಸಾಬೀತುಪಡಿಸಿದೆ. ಅಂತರಿಕ್ಷ ನೌಕೆಯಲ್ಲಿ ಜೋಡಿಸಲಾಗಿದ್ದ ಸಾಧನವು ಪ್ರಥಮ ಬಾರಿಗೆ ನೀರಿನ ಅಂಶವುಳ್ಳ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ಸಂಗ್ರಹಿಸಿದೆ ಎಂದು ಚೀನಾ ವಿಜ್ಞಾನ ಅಕಾಡೆಮಿಯ ಸಂಶೋಧಕರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.
ನೀರನ್ನು ರೂಪಿಸುವ ಹೈಡ್ರೋಜನ್ ಹೊತ್ತುತಂದ ಚಂದ್ರ ಮಾರುತವು ಚಂದ್ರನಲ್ಲಿರುವ ಮಣ್ಣಿಗೆ ಹೆಚ್ಚಿನ ಆದ್ರತೆ ನೀಡಿದೆ. ಕಲ್ಲಿನಲ್ಲಿ ಕಂಡು ಬಂದ ಹೆಚ್ಚುವರಿ ನೀರಿನ ಪ್ರಮಾಣ ಚಂದ್ರನ ಒಳಭಾಗದಿಂದ ಹುಟ್ಟಿಕೊಂಡಿರಬಹುದು. ಚಂದ್ರನ ಮೇಲ್ಮೈ ಒಂದು ನಿರ್ಧಿಷ್ಟ ಅವಧಿಯಲ್ಲಿ ಒಣಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.





