ತೆಲಂಗಾಣ: ದೇವಾಲಯದಲ್ಲಿ ಮನುಷ್ಯ ರುಂಡ ಪತ್ತೆ; ನರ ಬಲಿಯ ಶಂಕೆ

ಹೈದರಾಬಾದ್, ಜ. 10: ತೆಲಂಗಾಣದ ನಲಗೊಂಡ ಜಿಲ್ಲೆಯ ದೇವಾಲಯವೊಂದರಲ್ಲಿ ಸೋಮವಾರ ಅನಾಮಿಕ ವ್ಯಕ್ತಿಯೋರ್ವನ ರುಂಡ ಪತ್ತೆಯಾಗಿದ್ದು, ನರ ಬಲಿಯ ಶಂಕೆ ವ್ಯಕ್ತವಾಗಿದೆ. ನಲಗೊಂಡದ ಗೊಲ್ಲಪಳ್ಳಿ ಮಂಡಲದ ಕುರ್ಮೇಡು ಗ್ರಾಮದ ಹೊರವಲಯದಲ್ಲಿರುವ ಮೆಟ್ಟು ಮಹಾಂಕಾಳಿ ದೇವಾಲಯದ ದೇವಿಯ ಮೂರ್ತಿಯ ಪಾದದಲ್ಲಿ ಈ ರುಂಡ ಪತ್ತೆಯಾಗಿದೆ.
ಅರ್ಚಕರು ಸೋಮವಾರ ಮುಂಜಾನೆ ದೇವಾಲಯಕ್ಕೆ ಆಗಮಿಸಿದಾಗ ದೇವಿಯ ಮೂರ್ತಿಯ ಪಾದದಲ್ಲಿದ್ದ ಈ ರುಂಡವನ್ನು ಕಂಡು ಭೀತಿಗೊಂಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೆ, ಆ ಪ್ರದೇಶವನ್ನು ಸುತ್ತುವರಿದಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ನರಬಲಿ ನಡೆದ ಕುರುಹು ಪೊಲೀಸರಿಗೆ ಪತ್ತೆಯಾಗಿಲ್ಲ. 30 ವರ್ಷ ಪ್ರಾಯದವನು ಎಂದು ಹೇಳಬಹುದಾದ ವ್ಯಕ್ತಿಯನ್ನು ಬೇರೆ ಕಡೆ ಹತ್ಯೆ ನಡೆಸಿ, ಅನಂತರ ಆತನ ತಲೆಯನ್ನು ಇಲ್ಲಿ ತಂದು ಹಾಕಿರಬೇಕು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಹಾಗೂ ಮುಂಡ ಪತ್ತೆ ಹಚ್ಚಲು ಪೊಲೀಸರು ಐದು ವಿಶೇಷ ತಂಡಗಳನ್ನು ರೂಪಿಸಿದ್ದಾರೆ. ಶ್ವಾನ ದಳವನ್ನ ಕೂಡ ತನಿಖೆಗೆ ಬಳಸಿಕೊಳ್ಳಲಾಗುತ್ತಿದೆ.
ಈ ಸ್ಥಳ ಹೈದರಾಬಾದ್-ನಾಗಾರ್ಜುನ ಸಾಗರ್ ಹೆದ್ದಾರಿಗೆ ಸಮೀಪದಲ್ಲಿರುವುದರಿಂದ ಕೊಲೆಗಾರರು ಈ ರುಂಡವನ್ನು ವಾಹನದಲ್ಲಿ ತಂದು ಇಲ್ಲಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರ ತಂಡ ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದೆ ಹಾಗೂ ಇತರ ಕೆಲವು ಸುಳಿವುಗಳ ಆಧಾರದಲ್ಲಿ ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿ ಚಿಂಟಪಲ್ಲಿ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಗುರುತಿಸಲು ಜಾಗೃತರಾಗಿ ಇರುವಂತೆ ಸುತ್ತಮುತ್ತಲ ಪೊಲೀಸ್ ಠಾಣೆಗಳನ್ನು ನಾವು ಎಚ್ಚರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







