ಮೂರನೇ ಟೆಸ್ಟ್: ರಬಾಡ ನೇತೃತ್ವದಲ್ಲಿ ಸಂಘಟಿತ ಬೌಲಿಂಗ್ ದಾಳಿ, ಭಾರತ 223 ರನ್ಗೆ ಆಲೌಟ್
ವಿರಾಟ್ ಕೊಹ್ಲಿ ಅರ್ಧಶತಕ

photo:PTI
ಕೇಪ್ಟೌನ್, ಜ.11: ಕಾಗಿಸೊ ರಬಾಡ (4-73)ನೇತೃತ್ವದ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಮೊದಲ ಇನಿಂಗ್ಸ್ನಲ್ಲಿ 223 ರನ್ಗೆ ಆಲೌಟ್ ಮಾಡಿದೆ.
ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್ ಆರಂಭಿಸಿದ ರಾಹುಲ್(12) ಹಾಗೂ ಮಯಾಂಕ್ ಅಗರ್ವಾಲ್(15) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಚೇತೇಶ್ವರ ಪೂಜಾರ (43, 77 ಎಸೆತ, 7 ಬೌಂಡರಿ) ಹಾಗೂ ಕೊಹ್ಲಿ 3ನೇ ವಿಕೆಟ್ಗೆ 62 ರನ್ ಜೊತೆಯಾಟ ನಡೆಸಿದರು. ಪೂಜಾರ ಹಾಗೂ ಅಜಿಂಕ್ಯ ರಹಾನೆ(09)21 ರನ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದರು. ಆಗ ವಿಕೆಟ್ಕೀಪರ್ ರಿಷಭ್ ಪಂತ್ರೊಂದಿಗೆ ಕೈಜೋಡಿಸಿದ ಕೊಹ್ಲಿ 5ನೇ ವಿಕೆಟ್ಗೆ 51 ರನ್ ಜೊತೆಯಾಟ ನಡೆಸಿದರು. ಪಂತ್ 27 ರನ್ಗೆ ಔಟಾದ ಬಳಿಕ ಬಾಲಂಗೋಚಿ ಶಾರ್ದೂಲ್ ಠಾಕೂರ್ (12)ರೊಂದಿಗೆ 7ನೇ ವಿಕೆಟ್ಗೆ 30 ರನ್ ಸೇರಿಸಿದ ಕೊಹ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಒತ್ತಡದ ನಡುವೆಯೂ ತಾಳ್ಮೆಯ ಹಾಗೂ ಶಿಸ್ತುಬದ್ಧ ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 158 ಎಸೆತಗಳಲ್ಲಿ 28ನೇ ಅರ್ಧಶತಕ ಸಿಡಿಸಿದರು. ಸಾಹಸಮಯ ಅರ್ಧಶತಕದೊಂದಿಗೆ ಕೊಹ್ಲಿ ಹೊಸ ವರ್ಷವನ್ನು ಆರಂಭಿಸಿದರು. 201 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 79 ರನ್ ಗಳಿಸಿದ ಬಳಿಕ ಕೊಹ್ಲಿ ವೇಗದ ಬೌಲರ್ ಕಾಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 28ನೇ ಶತಕ ಗಳಿಸುವುದರಿಂದ ವಂಚಿತರಾದರು.
ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗದಲ್ಲಿ ರಬಾಡ ನಾಲ್ಕು ವಿಕೆಟ್ ಪಡೆದರೆ, ಮಾರ್ಕೊ ಜಾನ್ಸನ್(3-55)ಮೂರು ವಿಕೆಟ್ ಪಡೆದು ರಬಾಡಗೆ ಸಾಥ್ ನೀಡಿದರು.