ಕಾರಾಗೃಹದಲ್ಲಿ ತೃತೀಯ ಲಿಂಗಿ ಕೈದಿಗಳಿಗೆ ಪ್ರತ್ಯೇಕ ವಾರ್ಡ್ ನಿರ್ಮಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಹೊಸದಿಲ್ಲಿ, ಜ. 12: ತೃತೀಯ ಲಿಂಗಿ ಕೈದಿಗಳು ಯಾವುದೇ ರೀತಿಯ ಶೋಷಣೆಗೆ ಗುರಿಯಾಗದಿರಲು ಕಾರಾಗೃಹದಲ್ಲಿ ಪ್ರತ್ಯೇಕ ವಾರ್ಡ್ ನಿರ್ಮಿಸುವಂತೆ ಕೇಂದ್ರ ಸರಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರು ಹಾಗೂ ಡಿಜಿಪಿಗಳಿಗೆ ಕಳುಹಿಸಿದ ಪತ್ರದಲ್ಲಿ ಕೇಂದ್ರ ಗೃಹ ಸಚಿವಾಲಯ, ಕಾರಾಗೃಹದಲ್ಲಿ ತೃತೀಯ ಲಿಂಗಿ-ಪುರುಷ ಕೈದಿಗಳು ಹಾಗೂ ತೃತೀಯ ಲಿಂಗ ಮಹಿಳಾ ಕೈದಿಗಳಿಗೆ ಪ್ರತ್ಯೇಕ ವಾರ್ಡ್ ನಿರ್ಮಿಸುವಂತೆ ಸೂಚಿಸಿದೆ.
ಆದರೆ, ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವುದಿಲ್ಲ ಹಾಗೂ ಯಾವುದೇ ಸಾಮಾಜಿಕ ಕಳಂಕ ಪ್ರಚಾರ ಮಾಡುವುದಿಲ್ಲ ಎಂಬ ಖಾತರಿ ನೀಡಬೇಕು ಎಂದು ಅದು ಹೇಳಿದೆ. ತೃತೀಯ ಲಿಂಗಿ-ಪುರುಷ ಕೈದಿಗಳು ಹಾಗೂ ತೃತೀಯ ಲಿಂಗಿ ಮಹಿಳಾ ಕೈದಿಗಳಿಗೆ ಪ್ರತ್ಯೇಕ ಶೌಚಾಲಯ ಹಾಗೂ ಶವರ್ ವ್ಯವಸ್ಥೆ ಒದಗಿಸುವ ಮೂಲಕ ತೃತೀಯ ಲಿಂಗಿಗಳ ಖಾಸಗಿತನ ಹಾಗೂ ಗೌರವದ ಹಕ್ಕನ್ನು ಸಂರಕ್ಷಣೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ
Next Story





