ಕೋವಿಡ್ ಹರಡುವ ಪಾದಯಾತ್ರೆ ನಿಲ್ಲಿಸಲು ಬಿಜೆಪಿ ಶಾಸಕರ ಒತ್ತಾಯ

ಬೆಂಗಳೂರು, ಜ.12: ಮೇಕೆದಾಟು ಸಂಬಂಧ ಕಾಂಗ್ರೆಸ್ ಪಾದಯಾತ್ರೆ ಕೋವಿಡ್ ಹರಡುವಿಕೆಗೆ ಕಾರಣವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಒಂದು ನಿಯಮ, ಇತರ ಜನಸಾಮಾನ್ಯರಿಗೆ ಇನ್ನೊಂದು ನಿಯಮ ಎಂಬ ಮಾತು ಕೇಳಿಸುವಂತಾಗಿದೆ. ಕೋವಿಡ್ ಕಾರಣಕ್ಕಾಗಿ ಪಾದಯಾತ್ರೆ ದಯವಿಟ್ಟು ಕೈಬಿಡಿ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಒತ್ತಾಯಿಸಿದರು.
ಬುಧವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳು ಮೇಕೆದಾಟು ಯೋಜನೆ ಬಗ್ಗೆ ಒಕ್ಕೊರಲಿನಿಂದ ಆಗ್ರಹಿಸುತ್ತಿವೆ. ಹೀಗಿದ್ದರೂ ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೋವಿಡ್ 3ನೇ ಅಲೆ ಮತ್ತು ಒಮೈಕ್ರಾನ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ನಿನ್ನೆ ಒಂದೇ ದಿನ 15 ಸಾವಿರ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಸರಕಾರ ಮತ್ತು ನಮ್ಮ ಪಕ್ಷ ಕೊರೋನ ತಡೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಮೇಕೆದಾಟು ಸಂಬಂಧ ಬಿಜೆಪಿ ಸರಕಾರವು ಗರಿಷ್ಠ ಪ್ರಯತ್ನ ಮಾಡಿದೆ. ಕೇಂದ್ರ ಸರಕಾರಕ್ಕೆ ಒಪ್ಪಿಸುವುದು, ಸುಪ್ರೀಂ ಕೋರ್ಟ್‍ನಲ್ಲಿ ದಾವೆಗೆ ಉತ್ತರ ನೀಡುವುದು ಸೇರಿದಂತೆ ಗರಿಷ್ಠ ಪ್ರಯತ್ನ ನಡೆಸಿದೆ. ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಬಿಜೆಪಿ ಸದಾ ಬದ್ಧವಾಗಿಯೇ ನಿಂತಿದೆ ಎಂದು ಅವರು ವಿವರಿಸಿದರು.
ಪಾದಯಾತ್ರೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ಧೋರಣೆಯನ್ನು ಬದಲಿಸಬೇಕಿದೆ. ಕಾಂಗ್ರೆಸ್ ಪಕ್ಷವು ಪಾದಯಾತ್ರೆ ಮೂಲಕ ರಾಜ್ಯದೆಲ್ಲೆಡೆ ಕೋವಿಡ್ ಹರಡುತ್ತಿದೆ ಎಂದು ಆಕ್ಷೇಪಿಸಿದ ಅವರು, ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಯವಿಟ್ಟು ಪಾದಯಾತ್ರೆಯನ್ನು ಬೆಂಗಳೂರಿಗೆ ತರಬೇಡಿ ಎಂದು ಮನವಿ ಮಾಡಿದ ಅವರು, ಸರಕಾರವೂ ಪಾದಯಾತ್ರೆ ನಿಲ್ಲಿಸಲು ಅವರನ್ನು ಬಂಧಿಸಲಿ ಎಂದು ಆಗ್ರಹಿಸಿದರು.
ನಿನ್ನೆ ಕನಕಪುರದ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿದ್ದರು. ಅನಿವಾರ್ಯವಾದರೆ ಇಬ್ಬರೇ ಪಾದಯಾತ್ರೆ ಮಾಡುವುದಾಗಿ ಹೇಳಿದ ಮುಖಂಡರು ನಡೆದುಕೊಳ್ಳುತ್ತಿರುವ ರೀತಿ ಇದುವೇ? ಎಂದು ಪ್ರಶ್ನಿಸಿದ ಅರವಿಂದ ಲಿಂಬಾವಳಿ, ಕೋವಿಡ್ ಪರೀಕ್ಷೆಗೆ ಹೋದರೆ ಬೆದರಿಸಿ ಕಳುಹಿಸುವ ವರ್ತನೆಯನ್ನು ಕಾಂಗ್ರೆಸ್ ಮುಖಂಡರು ತೋರಿಸುತ್ತಾರೆ ಎಂದು ಆಕ್ಷೇಪಿಸಿದರು.
ಪಾದಯಾತ್ರೆಯಿಂದ ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಶೇ.7ಕ್ಕೂ ಹೆಚ್ಚಾಗಿದೆ. ಕೂಡಲೇ ಪಾದಯಾತ್ರೆ ಮಾಡುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಅವರು, ಮಾಸ್ಕ್ ಹಾಕದೆ ಪಾದಯಾತ್ರೆ ಮಾಡುವ ಡಿ.ಕೆ.ಶಿವಕುಮಾರ್ ಕೂಡಲೇ ಕೋವಿಡ್ ಪರೀಕ್ಷೆಗೆ ಒಳಪಡಲಿ. ಆಗ ನಿಮಗೂ ಕೋವಿಡ್ ತಗುಲಿದ್ದು ಜನರಿಗೆ ತಿಳಿಯಲಿದೆ ಎಂದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೆಂಗಳೂರಿನ ಜನ ಪಾದಯಾತ್ರೆಯನ್ನು ವಿರೋಧಿಸುತ್ತಾರೆ. ತಕ್ಷಣ ಪಾದಯಾತ್ರೆಯನ್ನು ನಿಲ್ಲಿಸದಿದ್ದರೆ ಪಾದಯಾತ್ರೆಗೆ ಪ್ರತಿರೋಧ ಒಡ್ಡಲಿದ್ದೇವೆ. ನಮಗೆ ಜನರ ಪ್ರಾಣ ಮುಖ್ಯವೇ ಹೊರತು ಪಾದಯಾತ್ರೆ, ಹೋರಾಟ ಮುಖ್ಯವಲ್ಲ. ಪಾದಯಾತ್ರೆ ನಿಲ್ಲಿಸದೆ ಇದ್ದರೆ ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಲಿದ್ದಾರೆ ಎಂದು ಎಚ್ಚರಿಸಿದರು.
ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ದಿನಗೂಲಿಗಳು, ಗರಿಷ್ಠ ವ್ಯಾಪಾರಸ್ಥರು ಇರುವ ಮತ್ತು ಅಧಿಕ ಪ್ರಮಾಣದ ಜನದಟ್ಟಣೆ ಇರುವ ನನ್ನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ತರಬೇಡಿ ಎಂದು ಒತ್ತಾಯಿಸಿದರು.
ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಬೆಂಗಳೂರಿನ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಜಾರಿಗೊಳ್ಳಲು ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರವೇ ಕಾರಣ. ಮೇಕೆದಾಟು ವಿಷಯದಲ್ಲಿ ಕೆಲವು ನ್ಯಾಯಾಲಯದಲ್ಲಿ ಮತ್ತು ಇನ್ನೂ ಕೆಲವು ಮಾತುಕತೆಯಲ್ಲಿ ಬಗೆಹರಿಯಬೇಕಾಗಿದೆ. ತಮ್ಮ 5 ವರ್ಷಗಳ ಅಧಿಕಾರಾವಧಿಯಲ್ಲಿ ಸುಮ್ಮನೆ ಕುಳಿತು ಕ್ಯಾಬಿನೆಟ್‍ನಲ್ಲಿ ಚರ್ಚಿಸದವರು ಕೋವಿಡ್ ಆತಂಕಕಾರಿಯಾಗಿ ಇರುವ ಈ ಸಂದರ್ಭದಲ್ಲಿ ಕೋವಿಡ್ ಹಬ್ಬಿಸಲು ಯಾಕೆ ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‍ನವರು ನೀರಿನ ಬಗ್ಗೆ ತೋರುವ ಕಾಳಜಿಯನ್ನು ಇಲ್ಲಿನ ಜನರ ಜೀವದ ಬಗ್ಗೆಯೂ ತೋರಿಸಲಿ. ರಾಜ್ಯದ ಗಡಿ ಪ್ರಶ್ನೆ, ನೀರಿನ ಪ್ರಶ್ನೆ ಬಂದಾಗ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಬಿಜೆಪಿ ಅದನ್ನು ಬೆಂಬಲಿಸುತ್ತದೆ. ಇದರಲ್ಲಿ ರಾಜಕೀಯ ಬೆರೆಸಿ ಅಮಾಯಕರ ಪ್ರಾಣಹತ್ಯೆಗೆ ಕಾರಣ ಆಗಬಾರದು ಎಂದು ಅವರು ಮನವಿ ಮಾಡಿದರು.
ಮತ್ತೊಂದು ಲಾಕ್ ಡೌನ್ ಬೆಂಗಳೂರಿಗೆ ಬೇಡ. ಪರಿಸ್ಥಿತಿ ಅರ್ಥ ಮಾಡಿಕೊಂಡು ಬೆಂಗಳೂರಿಗೆ ಪಾದಯಾತ್ರೆ ತರಬೇಡಿ. ಅನಿವಾರ್ಯ ಸಂದರ್ಭದಲ್ಲಿ ಕಠಿಣ ಕ್ರಮವನ್ನು ರಾಜ್ಯ ಸರಕಾರ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.







