ಕರ್ನಾಟಕದ ಹಿತಕ್ಕಾಗಿ ಏನನ್ನೂ ಮಾಡಿಲ್ಲ: ಕೇಂದ್ರ ಸರಕಾರ-ಬಿಜೆಪಿ ಸಂಸದರ ವಿರುದ್ಧ ಮನು ಬಳಿಗಾರ್ ಕಿಡಿ

ಬೆಂಗಳೂರು, ಜ.12: 25 ಜನ ಬಿಜೆಪಿ ಸಂಸದರನ್ನು ಆರಿಸಿ ಕಳಿಸಿರುವ ಕರ್ನಾಟಕದ ಹಿತಕ್ಕಾಗಿ ಕೇಂದ್ರ ಸರಕಾರ ಎದ್ದು ಕಾಣುವಂಥದನ್ನು ಏನನ್ನೂ ಮಾಡಿಲ್ಲ. ಲೋಕಸಭೆಗೆ ಆಯ್ಕೆಯಾಗಿ ಹೋದವರೂ ಈ ಬಗ್ಗೆ ಧ್ವನಿ ಎತ್ತದೇ ಇರುವುದು ವಿಷಾದನೀಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಮನುಬಳಿಗಾರ್ ಕಿಡಿಗಾರಿದ್ದಾರೆ.
ಆದರೆ, ತಮಿಳುನಾಡಿನಲ್ಲಿ ಬಿಜೆಪಿಯಿಂದ ಒಬ್ಬರು ಮಾತ್ರ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಆದಾಗ್ಯೂ ಆ ನಾಡಿನ ವೈದ್ಯಕೀಯ ಕ್ಷೇತ್ರದ ಮತ್ತು ಭಾಷಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರಕಾರ ಮಾಡುತ್ತಿರುವ ಸಹಾಯ ಕಣ್ಣಿಗೆ ಕುಕ್ಕುವಂತಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರವು ತನ್ನ ಖರ್ಚಿನಲ್ಲಿಯೇ ತಮಿಳುನಾಡಿನಲ್ಲಿ ನಿರ್ಮಿಸಿರುವ 11 ವೈದ್ಯಕೀಯ ಕಾಲೇಜುಗಳನ್ನು ಮತ್ತು ಒಂದು ಅಭಿಜಾತ ತಮಿಳು ಭಾಷೆ ಸಂಸ್ಥೆ(ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್)ಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದು ಅಭಿನಂದನಾರ್ಹ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನ ಕೇಂದ್ರೀಯ ಭಾಷೆ ಸಂಸ್ಥಾನದ (ಸಿಐಐಎಲ್) ಉನ್ನತ ಕನ್ನಡ ಅಧ್ಯಯನ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಅನೇಕ ಸಾರಿ ಆಗ್ರಹಿಸಿದರೂ ಕೇಂದ್ರ ಸರಕಾರ ಜಪ್ಪಯ್ಯ ಎಂದಿಲ್ಲ. ಕನ್ನಡದ ಬಗ್ಗೆ ಕೇಂದ್ರಕ್ಕೆ ಇರುವ ಮಲತಾಯಿ ಧೋರಣೆಯ ಪ್ರತೀಕ ಇದು. ಈಗಲಾದರೂ ಮೈಸೂರಿನ ಉನ್ನತ ಕನ್ನಡ ಅಧ್ಯಯನ ಸಂಸ್ಥೆಗೆ ವಾರ್ಷಿಕ ಹತ್ತು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇನೆ. ಇದು ತನಗೆ ಪ್ರಚಂಡ ಬೆಂಬಲ ನೀಡಿದ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಕೇಂದ್ರ ಮಾಡಬೇಕಾದ ಋಣ ಸಂದಾಯ ಎಂದು ಮನುಬಳಿಗಾರ್ ಪ್ರತಿಪಾದಿಸಿದ್ದಾರೆ.
ಪಕ್ಕದ ರಾಜ್ಯಕ್ಕೆ ಇಷ್ಟು ದೊಡ್ಡ ಪ್ರಮಾಣದ ಸಂಸ್ಥೆಗಳು ಬರುವುದಕ್ಕೆ ಹೆಮ್ಮೆ ಪಡುವ ಬಿಜೆಪಿಯ ಹಿರಿಯ ಪದಾಧಿಕಾರಿಗಳು ಕನ್ನಡ ನಾಡಿಗೆ ಏನನ್ನೂ ಮಾಡದೇ ಇರುವ ಕೇಂದ್ರ ಸರಕಾರದ ವಿರುದ್ಧ ಕನಿಷ್ಠ ಪಕ್ಷ ಕಳವಳವನ್ನು ವ್ಯಕ್ತಪಡಿಸದೇ ಇರುವುದಕ್ಕೆ ಏನು ಹೇಳಬೇಕು ಎಂದು ತಿಳಿಯುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.







