ಉತ್ತರಪ್ರದೇಶ: ಸಮಾಜವಾದಿ, ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಗೆ ಸೇರ್ಪಡೆ

ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನ ಆದಿತ್ಯನಾಥ್ ಸಚಿವ ಸಂಪುಟದಿಂದ ಇಬ್ಬರು ಸಚಿವರು ಹಾಗೂ ಪಕ್ಷದ 4 ಶಾಸಕರ ನಿರ್ಗಮನದಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಬಿಜೆಪಿಗೆ ಸಮಾಜವಾದಿ ಪಕ್ಷದ ಇಬ್ಬರು ಹಾಗೂ ಕಾಂಗ್ರೆಸ್ ನ ಓರ್ವ ಶಾಸಕ ಸೇರ್ಪಡೆಯಾಗಿದ್ದಾರೆ.
ಬೆಹತ್ ಕ್ಷೇತ್ರದ(ಸಹಾರನ್‌ಪುರ) ಕಾಂಗ್ರೆಸ್ ಶಾಸಕ ನರೇಶ್ ಸೈನಿ, ಸಿರ್ಸಗಂಜ್ (ಫಿರೋಝಾಬಾದ್) ಶಾಸಕ ಹರಿ ಓಂ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮಾಜಿ ಶಾಸಕ ಡಾ.ಧರ್ಮಪಾಲ್ ಸಿಂಗ್ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. 403 ಸದಸ್ಯ ಬಲದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಪಕ್ಷವು 39.67 ರಷ್ಟು ಮತಗಳನ್ನು ಗಳಿಸಿತ್ತು.







