ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕಾಂಗ್ರೆಸ್

ರಾಮನಗರ: ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ತಾತ್ಕಾಲಿಕ ರದ್ದುಗೊಳಿಸಿಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಹೈಕಮಾಂಡ್ ಸೂಚನೆಯಂತೆ ಪಾದಯಾತ್ರೆಯನ್ನು ನಿಲ್ಲಿಸಿದ ನಾಯಕರು ಕೋವಿಡ್ ಕಡಿಮೆಯಾದ ಬಳಿಕ ಮತ್ತೆ ಮುಂದುವರಿಸುವಂತೆ ತೀರ್ಮಾನಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯ್ಕಲ್ಲಿ ಮಾತನಾತಾಡಿದ ಸಿದ್ದರಾಮಯ್ಯ, ಕಳೆದ ನಾಲ್ಕು ದಿನಗಳಿಂದ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದಂತಹ ಪಕ್ಷದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ, ಸಂಘ ಸಂಸ್ಥೆಗಳ ಸದಸ್ಯರಿಗೂ, ಚಿತ್ರ ರಂಗದ ಕಲಾವಿದರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಜನಪರ ಕಾಳಜಿಯಿಂದ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ನಾವು ಪಾದಯಾತ್ರೆ ಘೋಷಣೆ ಮಾಡಿದಾಗ ಕೊರೊನಾ 3ನೇ ಅಲೆ ಆರಂಭವಾಗಿರಲಿಲ್ಲ. ವಿಧಾನಸಭಾ ಅಧಿವೇಶನಕ್ಕೂ ಮೊದಲೇ ಪಾದಯಾತ್ರೆ ಘೋಷಣೆ ಆಗಿತ್ತು. ಆದರೆ ಈಗ ಕೊರೋನ ಸೋಂಕು ವ್ಯಾಪಕವಾಗಿ ಹರಡಲು ಆರಂಭವಾಗಿದೆ. ನಿನ್ನೆ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಹೇಳಿದರು.
ಇಂದು ರಾಮನಗರದಿಂದ ಪಾದಯಾತ್ರೆ ಆರಂಭವಾಗಬೇಕಿತ್ತು, ಆದರೆ ಕೊರೊನ ಸೋಂಕು ತಡೆಗಟ್ಟಲು ನಮಗಿರುವ ಜವಾಬ್ದಾರಿಯನ್ನು ಅರಿತು ನಾವು ಪಾದಯಾತ್ರೆಯನ್ನು ಶುರು ಮಾಡಿಲ್ಲ. ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡಲು ಬಿಜೆಪಿ ಪಕ್ಷ ಕಾರಣ. ಕೊವಿಡ್ ನಿಯಮಗಳು ಘೋಷಣೆಯಾದ ನಂತರವೂ ಮುಖ್ಯಮಂತ್ರಿಗಳಾದಿಯಾಗಿ ಸಚಿವರು ಹಾಗೂ ಶಾಸಕರು ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿದರು. ಜನವರಿ 6 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ನ ನೂತನ ಸದಸ್ಯರ ಪ್ರಮಾಣ ವಚನ ಸಮಾರಂಭ ನಡೆಸಲಾಯಿತು. ರೇಣುಕಾಚಾರ್ಯ, ಸುಭಾಷ್ ಗುತ್ತೇದಾರ್ ಸಾವಿರಾರು ಜನ ಸೇರಿಸಿ ಮೊನ್ನೆ ಪ್ರತಿಭಟನೆ ನಡೆಸಿದ್ರು. ಗೃಹ ಸಚಿವರ ತವರೂರಲ್ಲಿ ದೊಡ್ಡ ಜಾತ್ರೆ ನಡೆಯಿತು. ಆಗ ಜನರಿಗೆ ಕೊರೊನಾ ಹರಡುವ ಆತಂಕ ಸರ್ಕಾರಕ್ಕೆ ಇರಲಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರಲ್ಲಿ ಒಬ್ಬರ ಮೇಲೂ ಈ ವರೆಗೆ ಕೇಸ್ ದಾಖಲಾಗಿಲ್ಲ, ಆದರೆ ಕಾಂಗ್ರೆಸ್ ಪಕ್ಷದವರ ಮೇಲೆ ಮಾತ್ರ ಸುಳ್ಳು ಸುಳ್ಳು ಕೇಸ್ ಹಾಕಿ, ಎಫ್.ಐ.ಆರ್ ದಾಖಲಿಸಿ ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಹೇಗಾದರೂ ಮಾಡಿ ಪಾದಯಾತ್ರೆಯನ್ನು ನಿರ್ಬಂಧಿಸಬೇಕು ಎಂಬುದು ಈ ಸರ್ಕಾರದ ಉದ್ದೇಶವಾಗಿದೆ. ಒಟ್ಟಾರೆ ಸರ್ಕಾರ ಕೊವಿಡ್ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎಂದರು.
ಜನರ ಆರೋಗ್ಯದ ಕಾಳಜಿ ನಮಗೂ ಇದೆ, ನಮ್ಮ ಪಾದಯಾತ್ರೆ ಇಂದ ಕೊರೋನ ಸೋಂಕು ಉಲ್ಬಣವಾಯಿತು ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಬರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು 15 ಸಾವಿರದ ಗಡಿ ದಾಟಿದೆ, ಇನ್ನೆರೆಡು ದಿನಗಳಲ್ಲಿ ನಮ್ಮ ಪಾದಯಾತ್ರೆ ಬೆಂಗಳೂರು ಪ್ರವೇಶ ಮಾಡುವುದಿತ್ತು, ಸೋಂಕು ಹೆಚ್ಚಿರುವ ಕಾರಣ ತಾತ್ಕಾಲಿಕವಾಗಿ ನಮ್ಮ ಪಾದಯಾತ್ರೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ. 3ನೇ ಅಲೆಯ ತೀವ್ರತೆ ಕಡಿಮೆಯಾಗಿ, ಕೊವಿಡ್ ಮಾರ್ಗಸೂಚಿಗಳು ತೆರವಾದ ಬಳಿಕ ಮತ್ತೆ ರಾಮನಗರದಿಂದಲೇ ಪಾದಯಾತ್ರೆಯನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.
ಪಾದಯಾತ್ರೆ ಆಯೋಜನೆಯಲ್ಲಿ ನಿರಂತರ ಶ್ರಮಿಸಿದ ಸ್ಥಳೀಯ ಸಂಸದರಾದ ಡಿ.ಕೆ ಸುರೇಶ್ ಅವರಿಗೂ ಹಾಗೂ ನಾವು ಆಗಮಿಸಿದ ಕಡೆಗಳಲೆಲ್ಲಾ ಆರತಿ ಬೆಳಗಿ, ಎಳ ನೀರು, ಹಣ್ಣು, ತಿಂಡಿ ತಿನಿಸು ನೀಡಿ ಸ್ವಾಗತಿಸಿ, ಅಪಾರ ಪ್ರೀತಿ ತೋರಿದ ಸ್ಥಳೀಯ ಜನರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಜನರಿಗೆ ಈ ಪಾದಯಾತ್ರೆ ನಡೆಯಬೇಕು, ಇದರ ಅಗತ್ಯ ಎಷ್ಟಿದೆ ಎಂಬ ಅರಿವು ಮೂಡಿತ್ತು. ಆದರೆ ಕೊರೊನಾ ಉಲ್ಬಣಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸೋಣ ಎಂದು ಇಂದು ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ನಮಗೆ ಜನರ ಹಿತರಕ್ಷಣೆ ಮುಖ್ಯ. ಇಂದು ಜನ ಅತ್ಯಂತ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದರು, ಇಲ್ಲಿ ಸೇರಿರುವ ಪ್ರತಿಯೊಬ್ಬರು ಯಾವುದೇ ಬೇಸರ ಮಾಡಿಕೊಳ್ಳದೆ, ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆದ ಮೇಲೆ ಪಾದಯಾತ್ರೆ ಪುನರಾರಂಭ ಮಾಡುತ್ತೇವೆ, ಆಗಲೂ ತಾವೆಲ್ಲ ನಮ್ಮ ಜೊತೆಗಿದ್ದು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ.
ಪಾದಯಾತ್ರೆ ಕುರಿತು ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಪಾದಯಾತ್ರೆಗೆ ಸರಕಾರ ನಿರ್ಬಂಧ ವಿಧಿಸಿತ್ತು.
ಇದು ಕೇವಲ ತಾತ್ಕಾಲಿಕ ತಡೆ ಅಷ್ಟೇ , ನಮ್ಮ ಹೋರಾಟ ಮತ್ತೆ ಮುಂದುವರಿಯುತ್ತದೆ. ಜನರ ಆರೋಗ್ಯ , ನ್ಯಾಯಾಲಯದ ಆದೇಶವನ್ನು ಗೌರವಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಈ ಹೋರಾಟವನ್ನು ನಿಲ್ಲಿಸುವುದಿಲ್ಲ.
ಡಿ.ಕೆ ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷ








