ಮೂರನೇ ಟೆಸ್ಟ್:ದಕ್ಷಿಣ ಆಫ್ರಿಕಾ ಗೆಲುವಿಗೆ 212 ರನ್ ಗುರಿ ನೀಡಿದ ಭಾರತ
ರಿಷಭ್ ಪಂತ್ ಆಕರ್ಷಕ ಶತಕ, ಜಾನ್ಸನ್ಗೆ ನಾಲ್ಕು ವಿಕೆಟ್

Photo: AP
ಕೇಪ್ಟೌನ್, ಜ.13: ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ 198 ರನ್ ಗಳಿಸಿ ಆಲೌಟಾಗಿರುವ ಭಾರತವು ಆತಿಥೇಯ ದಕ್ಷಿಣ ಆಫ್ರಿಕಾದ ಗೆಲುವಿಗೆ 212 ರನ್ ಗುರಿ ನಿಗದಿಪಡಿಸಿದೆ.
ನ್ಯೂಲ್ಯಾಂಡ್ಸ್ನಲ್ಲಿ ಗುರುವಾರ ನಡೆದ ಮೂರನೇ ದಿನದಾಟದಲ್ಲಿ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಔಟಾಗದೆ 100 ರನ್(139 ಎಸೆತ, 6 ಬೌಂಡರಿ, 4 ಸಿಕ್ಸರ್) ಗಳಿಸಿ ಭಾರತವು ದಕ್ಷಿಣ ಆಫ್ರಿಕಾಕ್ಕೆ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
ಇದಕ್ಕೂ ಮೊದಲು 58 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಪಂತ್ ಆಸರೆಯಾದರು. ಈ ಜೋಡಿ 5ನೇ ವಿಕೆಟ್ ಜೊತೆಯಾಟದಲ್ಲಿ 95 ರನ್ ಸೇರಿಸಿತು. ಕೊಹ್ಲಿ 143 ಎಸೆತಗಳನ್ನು ಎದುರಿಸಿದ್ದರೂ 4 ಬೌಂಡರಿ ಸಹಿತ ಕೇವಲ 29 ರನ್ ಗಳಿಸಿದರು. ಕಳಪೆ ಫಾರ್ಮ್ನಲ್ಲಿರುವ ಚೇತೇಶ್ವರ ಪೂಜಾರ(9) ಹಾಗೂ ಅಜಿಂಕ್ಯ ರಹಾನೆ(1) ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಜಾನ್ಸನ್(4-36) ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಲುಂಗಿ ಗಿಡಿ(3-21) ಹಾಗೂ ಕಾಗಿಸೊ ರಬಾಡ(3-53)ತಲಾ ಮೂರು ವಿಕೆಟ್ಗಳನ್ನು ಪಡೆದರು.
3 ಪಂದ್ಯಗಳ ಸರಣಿ 1-1ರಿಂದ ಸಮಬಲವಾಗಿದ್ದು, ಉಭಯ ತಂಡಗಳು ಸರಣಿಯನ್ನು ಜಯಿಸುವ ಗುರಿ ಹಾಕಿಕೊಂಡಿವೆ.