ಸಂಗೀತ ನಿರ್ದೇಶಕ ಉಡುಪಿ ವಾಸುದೇವ ಭಟ್ ನಿಧನ
ಉಡುಪಿ, ಜ.13: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಉಡುಪಿಯಲ್ಲಿ ನಾದವೈಭವಂ ಎಂಬ ಕಲಾ ಸಂಘಟನೆಯನ್ನು ಪ್ರಾರಂಭಿಸಿದ್ದ ಉಡುಪಿ ವಾಸುದೇವ ಭಟ್ (84) ಬೆಂಗಳೂರಿನ ಪುತ್ರಿಯ ಮನೆಯಲ್ಲಿ ಗುರುವಾರ ನಿಧನ ಹೊಂದಿದರು.
ವಾಸುದೇವ ಭಟ್ ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಖ್ಯಾತ ಸಂಗೀತಗಾರ ಪಿಟೀಲು ಮಂಜುನಾಥಯ್ಯ ಇವರ ಶಿಷ್ಯರಾಗಿದ್ದ ವಾಸುದೇವ್ ಭಟ್, ಗುರುಗಳಾಗಿ ಸಾಕಷ್ಟು ಮಂದಿ ಗಾಯಕರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ್ದಾರೆ. ಕಿನ್ನಿಗೋಳಿ ಮತ್ತು ಮುಲ್ಕಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಇವರು ಅನಂತರ ಉಡುಪಿಯಲ್ಲಿ ವಾಸವಾಗಿದ್ದರು.
ಉಡುಪಿಯಲ್ಲಿ ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟುಹಾಕಿ, ಸಂಗೀತ, ನೃತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ, ನಿರ್ದೇಶಿಸಿ, ಪಾತ್ರ ನಿರ್ವಹಿಸಿದ್ದರು. ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದ ಇವರು ಹೆಚ್ಚಿನೆಲ್ಲಾ ವಾದ್ಯ-ವಾದನಗಳನ್ನು ನುಡಿಸಬಲ್ಲವರಾಗಿದ್ದರು.
1990ರ ದಶಕದಲ್ಲಿ ಏಸುಕ್ರಿಸ್ತನ ಕುರಿತು ‘ಭುವನಜ್ಯೋತಿ’ ಎಂಬ ಪಂಚಭಾಷಾ ಚಿತ್ರ ನಿರ್ಮಿಸಿದ್ದ ಇವರು, ಕೆಲಕಾಲ ಉಡುಪಿಯಲ್ಲಿ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು.