ಬೆಂಗಳೂರು: ವಂಚನೆ ಆರೋಪ; ಹಾಂಗ್ ಕಾಂಗ್ ಕಂಪೆನಿ ನಿರ್ದೇಶಕ ಅನೂಪ್ ನಾಗರಾಲ್ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜ.13: ಸ್ಪೈಸ್ ಟ್ರೇಡಿಂಗ್ ಕಾರ್ಪೊರೇಷನ್ ಲಿ.(ಎಸ್ಟಿಸಿಎಲ್) ಜೊತೆ ವ್ಯವಹಾರ ನಡೆಸಿ ವಂಚನೆ ಎಸಗಿರುವ ಆರೋಪದ ಮೇಲೆ ಚೀನಾ ಮೂಲದ ಹೋವೆಲೈ ಜಿನ್ಸುಹಾಂಕಾಂಗ್, ಎಸ್ಎಆರ್ ಕಂಪೆನಿಗಳ ನಿರ್ದೇಶಕ ಅನೂಪ್ ನಾಗರಾಲ್ನನ್ನು ಜಾರಿ ನಿರ್ದೇಶನಾಲಯ (ಈಡಿ) ಬಂಧಿಸಿದೆ.
ಸ್ಪೈಸ್ ಟ್ರೇಡಿಂಗ್ ಕಾರ್ಪೊರೇಷನ್ ಲಿ.(ಎಸ್ಟಿಸಿಎಲ್) ಹಾಗೂ ಹೋವೆಲೈ ಜಿನ್ಸು- ಹಾಂಕಾಂಗ್, ಎಸ್ಎಆರ್- ಚೀನಾ ಲಿ. ಕಂಪೆನಿಗಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಸ್ಪೈಸ್ ಟ್ರೇಡಿಂಗ್ ಕಾರ್ಪೊರೇಷನ್ ಲಿ (ಎಸ್ಟಿಸಿಎಲ್)ನಿಂದ ಖರೀದಿಸಿದ ಬಹು ಕೋಟಿ ರೂ. ಮೌಲ್ಯದ ಉತ್ಪನ್ನಗಳಿಗೆ ಅನೂಪ್ ನಾಗರಾಲ್ ಒಡೆತನದ ಕಂಪೆನಿಗಳು ಹಣ ಪಾವತಿಸಿರಲಿಲ್ಲ ಎನ್ನಲಾಗಿದೆ.
ಒಪ್ಪಂದದಂತೆ ಆರೋಪಿ ಅನೂಪ್ ಕಂಪೆನಿಗೆ ಎಸ್ಟಿಸಿಎಲ್ ತನ್ನ ಉತ್ಪನ್ನಗಳನ್ನು ಪೂರೈಕೆ ಮಾಡಿರುವುದಕ್ಕೆ ಎರಡು ಸಂಸ್ಥೆಗಳು ಗ್ಯಾರಂಟಿ (ಭದ್ರತೆ) ಕೂಡ ನೀಡಿದ್ದವು. ಆದರೆ, ಅನೂಪ್ ಹಣ ಪಾವತಿಸದಿದ್ದಾಗ ಆತನ ಕಂಪನಿಗೆ ಹಣ ಪಾವತಿಸಲು 90 ದಿನ ಕಾಲಾವಕಾಶ ನೀಡಲಾಗಿತ್ತು.
ಆದರೆ, ಕಾಲಾವಕಾಶದೊಳಗೆ ಹಣ ಹಿಂತಿರುಗಿಸಿರಲಿಲ್ಲ. ಇದರಿಂದ ಎಸ್ಟಿಸಿಎಲ್ ಕಂಪೆನಿಗೆ ಒಟ್ಟು 249.572 ಯು.ಎಸ್ ಡಾಲರ್ ನಷ್ಟ ಉಂಟಾಗಿತ್ತು. ಈ ಸಂಬಂಧ 2009ರಲ್ಲಿ ಹೈಗ್ರೌಂಡ್ಸ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2019ರಲ್ಲಿ ಈಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ಆರೋಪಿ ಅನೂಪ್ ಸಂಸ್ಥೆಗೆ ಸೇರಿದ ಬಳ್ಳಾರಿ, ಬೆಂಗಳೂರು, ಹೊಸದಿಲ್ಲಿ, ಪಂಜಾಬ್, ಮಹಾರಾಷ್ಟ್ರ, ಗುಜರಾತ್ನಲ್ಲಿದ್ದ 187.67 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಹಿಂದಿನ ಡಿಸೆಂಬರ್ ನಲ್ಲಿ ವಂಚನೆ ಪ್ರಕರಣದ ಸಂಬಂಧ ಅನೂಪ್ನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಅನೂಪ್ ಬಿಡುಗಡೆ ಹೊಂದಿದ್ದ. ಇದಾದ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆದ್ದರಿಂದ ಪಿಎಂಎನ್ಎಲ್ ವಿಶೇಷ ನ್ಯಾಯಾಲಯವು ಅನೂಪ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.
ಇದರ ಬೆನ್ನಲ್ಲೇ ಈಡಿ ಅಧಿಕಾರಿಗಳು ಅನೂಪ್ನ್ನು ಬಂಧಿಸಿ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದರು.







