ಕೋವಿಡ್ ಮಾದರಿಯಾಗಿ ಪೊಲೀಸ್ ಠಾಣೆ ಮಾರ್ಪಾಡು: ಕಮಿಷನರ್ ಶಶಿಕುಮಾರ್

ಮಂಗಳೂರು, ಜ.13: ಕೋವಿಡ್ ಮೂರನೇ ಅಲೆ ಮುಂಜಾಗ್ರತಾ ಹಿನ್ನಲೆಯಲ್ಲಿ ನಗರ 21 ಪೊಲೀಸ್ ಠಾಣೆ ಸೇರಿದಂತೆ ಕಮಿಷನರೇಟ್ ಕಚೇರಿ, ಎಸಿಪಿ, ಸಿಎಆರ್, ಸಿಸಿಬಿ ಕಚೇರಿಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಗುರುವಾರ ಮಾದರಿ ಕೋವಿಡ್ ಠಾಣೆಯನ್ನು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಉದ್ಘಾಟಿಸಿ ಮಾತನಾಡಿ, ಕಮಿಷನರೇಟ್ ವ್ಯಾಪ್ತಿಯಲ್ಲಿ 2 ಸಾವಿರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೋವಿಡ್ ಅಲೆ ಸಂದರ್ಭ 410ಕ್ಕೂ ಅಧಿಕ ಮಂದಿ ಪಾಸಿಟಿವ್ ಬಂದಿದ್ದು, ಮೂವರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆ ಹಾಗೂ ಇತರ ಕಚೇರಿಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.
ಠಾಣೆಗೆ ಪ್ರವೇಶಕ್ಕೆ ಮುನ್ನ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲರೂ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಸರ್ ಬಳಕೆ, ಕಡ್ಡಾಯ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಯಾರೂ ಠಾಣೆಗೆ ಪ್ರವೇಶಿಸಬಾರದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಬೇಕು. ಕೋವಿಡ್ ಸಂಬಂಧಿತ ಯಾವುದೇ ಲಕ್ಷಣ ಕಂಡುಬಂದರೂ ಸಿಬ್ಬಂದಿ ಕೂಡಲೇ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಎಸಿಪಿ ನಟರಾಜ್, ಪರಮೇಶ್ವರ ಹೆಗಡೆ ಉಪಸ್ಥಿತರಿದ್ದರು.







