ಪ.ಬಂಗಾಳ: ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್ ಹಳಿ ತಪ್ಪಿ 5 ಸಾವು, 45 ಜನರಿಗೆ ಗಾಯ

photo:PTI
ಜಲಪೈಗುರಿ (ಪ.ಬಂ.),ಜ.13: ಪ.ಬಂಗಾಳದ ಜಲಪೈಗುರಿ ಜಿಲ್ಲೆಯ ಮೊಯ್ನಗುರಿ ಸಮೀಪ ಗುರುವಾರ ಗುವಾಹಟಿ-ಬಿಕಾನೇರ್ ಎಕ್ಸ್ಪ್ರೆಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ್ದು,ಕನಿಷ್ಠ ಐವರು ಮೃತಪಟ್ಟಿದ್ದಾರೆ ಮತ್ತು 45 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ತಿಳಿಸಿದೆ.
ಅವಶೇಷಗಳಡಿ ಹಲವಾರು ಪ್ರಯಾಣಿಕರು ಸಿಕ್ಕಿಹಾಕಿಕೊಂಡಿರುವುದನ್ನು ತೋರಿಸುವ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಗಾಯಾಳುಗಳನ್ನು ಮೊಯ್ನಗುರಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಾಳುಗಳನ್ನು ಜಲಪೈಗುರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಹಲವಾರು ಪ್ರಯಾಣಿಕರು ಹಳಿ ತಪ್ಪಿದ ಬೋಗಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದು,ಗ್ಯಾಸ್ ಕಟರ್ಗಳನ್ನು ಬಳಸಿ ಬೋಗಿಗಳನ್ನು ಒಡೆದು ಅವರನ್ನು ರಕ್ಷಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ತಾನು ಪರಿಸ್ಥಿತಿಯ ಮೇಲೆ ವೈಯಕ್ತಿಕ ನಿಗಾಯಿರಿಸಿದ್ದೇನೆ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದೇನೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಟ್ವೀಟಿಸಿದ್ದಾರೆ.
ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರಿಂದ ಉನ್ನತ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದೆ.
ಮೃತರ ಕುಟುಂಬಗಳಿಗೆ ತಲಾ ಐದು ಲ.ರೂ.,ಗಂಭೀರ ಗಾಯಾಳುಗಳಿಗೆ ಒಂದು ಲ.ರೂ. ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 25,000 ರೂ.ಗಳ ಪರಿಹಾರವನ್ನು ಪ್ರಕಟಿಸಲಾಗಿದೆ.
ಸಂಜೆ ಐದು ಗಂಟೆಯ ಸುಮಾರಿಗೆ ನ್ಯೂ ದೊಮೊಹನಿ ಮತ್ತು ನ್ಯೂ ಮೊಯ್ನಗುರಿ ನಿಲ್ದಾಣಗಳ ನಡುವೆ ರೈಲು ಹಳಿ ತಪ್ಪಿದ್ದು,ಒಂದು ಬೋಗಿ ಪಲ್ಟಿಯಾಗಿತ್ತು. ನ್ಯೂ ಜಲಪೈಗುರಿ ಮತ್ತು ಅಲಿಪುರದ್ವಾರ್ಗಳಿಂದ ರಕ್ಷಣಾ ರೈಲುಗಳು ಅಪಘಾತದ ಸ್ಥಳಕ್ಕೆ ಧಾವಿಸಿದ್ದವು.
ಬಿಕಾನೇರ್ ಜಂಕ್ಷನ್ನಿಂದ ಬುಧವಾರ ಪ್ರಯಾಣವನ್ನು ಆರಂಭಿಸಿದ್ದ ರೈಲು ಗುರುವಾರ ಸಂಜೆ ಗುವಾಹಟಿ ತಲುಪಬೇಕಿತ್ತು.







