ಆಂಧ್ರಪ್ರದೇಶ: ಟಿಡಿಪಿ ನಾಯಕನ ಹತ್ಯೆ

ಅಮರಾವತಿ, ಜ. 1: ತೆಲುಗುದೇಶಂ ಪಕ್ಷದ ನಾಯಕ ತೋಟ ಚಂದ್ರಯ್ಯ ಅವರನ್ನು ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಇರಿದು ಹಾಗೂ ದೊಣ್ಣೆಗಳಿಂದ ಥಳಿಸಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ರಾಜಕೀಯ ದ್ವೇಷದ ಕಾರಣಕ್ಕಾಗಿ ತೋಟ ಚಂದ್ರಯ್ಯ ಅವರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಬಿ. ಮೆಹರ್ ಜಯರಾಮ್ ಪ್ರಸಾದ್ ಅವರು ಹೇಳಿದ್ದಾರೆ. 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಲ್ಲಿ ಮೂವರನ್ನು ಚಿಂತ ಶಿವರಾಮಯ್ಯ, ಚಿಂತ ಆದಿನಾರಾಯಣ ಹಾಗೂ ತೋಟ ಆಂಜನೇಯಲು ಎಂದು ಗುರುತಿಸಲಾಗಿದೆ.
ಶಿವರಾಮಯ್ಯ ಅವರು ರಾಜ್ಯದಲ್ಲಿ ಇತರ ರಾಜಕೀಯ ಹತ್ಯೆಯಲ್ಲಿ ಕೂಡ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡ್ಲಪದವು ಗ್ರಾಮದಲ್ಲಿ ತೋಟ ಚಂದ್ರಯ್ಯ ಅವರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ದಾಳಿಗೊಳಗಾಗಿ ತೋಟ ಚಂದ್ರಯ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಹತ್ಯೆಯ ಹಿಂದೆ ರಾಜಕೀಯ ದ್ವೇಷ ಇದೆ ಎಂದು ತೋಟ ಚಂದ್ರಯ್ಯ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.





