ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 4,083 ಕೋಟಿ ರೂ.ರಾಜಧನ ಸಂಗ್ರಹ: ಸಚಿವ ಹಾಲಪ್ಪ ಆಚಾರ್

ಬೆಂಗಳೂರು, ಜ. 13: `ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 2021-22ನೆ ಸಾಲಿನ ನವೆಂಬರ್ ಅಂತ್ಯದವರೆಗೆ 2,560 ಕೋಟಿ ರೂ.ರಾಜಧನ ಸಂಗ್ರಹಣೆಗೆ ಗುರಿ ನಿಗದಿಪಡಿಸಿದ್ದು, 4,083.54 ಕೋಟಿ ರೂ.ಸಂಗ್ರಹಿಸಿ ಶೇ.160ರಷ್ಟು ಗುರಿಯನ್ನು ಸಾಧಿಸಲಾಗಿರುತ್ತದೆ' ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `2015-16ನೆ ಸಾಲಿನಿಂದ 2021ರ ನವೆಂಬರ್ ಅಂತ್ಯದವರೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಅಡಿಯಲ್ಲಿ 3025.22 ಕೋಟಿ ರೂ.ಸಂಗ್ರಹಿಸಲಾಗಿದ್ದು, ಪಿಎಂಕೆಕೆಕೆವೈ ಯೋಜನೆಗಳಿಗೆ 997.60 ಕೋಟಿ ರೂ. ಮತ್ತು ಕೋವಿಡ್-19 ವೈರಾಣು ತಡೆಗಟ್ಟಲು 183.38 ಕೋಟಿ ರೂ.ಒಟ್ಟು 1,180.98 ಕೋಟಿ ರೂ.ವೆಚ್ಚ ಮಾಡಲಾಗಿರುತ್ತದೆ' ಎಂದು ವಿವರ ನೀಡಿದರು.
`ಮುಖ್ಯ ಖನಿಜಗಳಾದ ಕಬ್ಬಿಣದ ಅದಿರು, ಮ್ಯಾಂಗನೀಸ್, ಬಾಕ್ಸೈಟ್, ಸುಣ್ಣದ ಕಲ್ಲು, ಚಿನ್ನ ಮತ್ತು ಇತರೆ ಖನಿಜಗಳ ಗಣಿಗಾರಿಕೆಗೆ ಒಟ್ಟು 311 ಗಣಿ ಗುತ್ತಿಗೆಗಳು ಮಂಜೂರಾಗಿದ್ದು, ಉಪ ಖನಿಜಗಳಾದ ಆಲಂಕಾರಿಕ ಶಿಲೆ (ಗ್ರಾನೈಟ್), ಕಟ್ಟಡ ಕಲ್ಲು, ಮರಳು, ಲ್ಯಾಟರೈಟ್, ಮುರರ್ಂ, ಸ್ಯಾಂಡ್ ಸ್ಟೋನ್, ಸಿಲಿಕಾಸ್ಯಾಂಡ್, ಕ್ವಾಡ್ಜ್ ಮತ್ತು ನದಿ ಮರಳು ಗಣಿಗಾರಿಕೆಗಾಗಿ ಒಟ್ಟು 3521 ಕಲ್ಲು ಗಣಿಗುತ್ತಿಗೆಗಳು ಮಂಜೂರಾಗಿರುತ್ತವೆ.
ಲೈಸೆನ್ಸ್ ನೀಡಿದ ಜಲ್ಲಿ ಕ್ರಷರ್‍ಗಳ ಸಂಖ್ಯೆ-1,914, ಮರಳು ಬೇಡಿಕೆ ಅಂದಾಜು-45 ದಶಲಕ್ಷ ಮೆಟ್ರಿಕ್ ಟನ್, ಪೂರೈಕೆ-37 ದಶಲಕ್ಷ ಮೆಟ್ರಿಕ್ ಟನ್, ಎಂ-ಸ್ಯಾಂಡ್ ಉತ್ಪಾದನೆ-30 ದಶಲಕ್ಷ ಮೆಟ್ರಿಕ್ ಟನ್, ನದಿಪಾತ್ರ ಮತ್ತು ಪಟ್ಟಾಜಮೀನುಗಳಲ್ಲಿ ಗಣಿಗಾರಿಕೆಯಿಂದ-4.5 ದಶಲಕ್ಷ ಟನ್, ಹೊರರಾಜ್ಯಗಳಿಂದ ಎಂ-ಸ್ಯಾಂಡ್ ಮತ್ತು ನದಿ ಮರಳು ಸರಬರಾಜು 2.5 ದಶಲಕ್ಷ ಟನ್, ಮರಳಿನ ಕೊರತೆ 8 ದಶಲಕ್ಷ ಟನ್ ಗಣಿ/ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ನೀಡಲಾಗಿದೆ ಎಂದು ವಿವರ ನೀಡಿದರು.
`ರಾಜ್ಯದಲ್ಲಿನ ಸರಕಾರಿ ಕಾಮಗಾರಿ ಮತ್ತು ಸಾರ್ವಜನಿಕರ ನಿರ್ಮಾಣ ಕಾಮಗಾರಿಗೆ ಕಡಿಮೆ ದರದಲ್ಲಿ ಮರಳನ್ನು ಪೂರೈಸುವ ಸಂಬಂಧ ಹೊಸ ಮರಳು ನೀತಿ-2020ನ್ನು ಜಾರಿಗೆ ತಂದು, ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) 2021ನ್ನು ರಚಿಸಲಾಗಿದೆ. ಹೊಸ ಮರಳು ನೀತಿಯಲ್ಲಿ ಸರಕಾರದಿಂದ ಅಧಿಸೂಚನೆ ಮೂಲಕ ನಿಗದಿಪಡಿಸಿದ ಸರಕಾರಿ ಸಂಸ್ಥೆ/ಇಲಾಖೆಯಿಂದ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಗ್ರಾಹಕರಿಗೆ ಆನ್‍ಲೈನ್ ಬುಕಿಂಗ್ ಮೂಲಕ ಮರಳು ಖರೀದಿಸಲು ಅವಕಾಶ ಕಲ್ಪಿಸಲಾಗಿರುತ್ತದೆ' ಎಂದು ಹೇಳಿದರು.
`ಗ್ರಾಮ ಪಂಚಾಯತ್‍ಗಳ ಮೂಲಕ ಪ್ರಥಮ, ದ್ವಿತೀಯ ಮತ್ತು ತೃತೀಯ ಶ್ರೇಣಿಯಲ್ಲಿ ಹಳ್ಳಗಳ ಪಾತ್ರಗಳಲ್ಲಿ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಮರಳಿಗೆ 300 ರೂ.ಗಳ ಮಾರಾಟ ದರವನ್ನು ನಿಗದಿಪಡಿಸಲಾಗಿರುತ್ತದೆ. ಸರಕಾರಿ ಸಂಸ್ಥೆಗಳ ಮೂಲಕ ಮೇಲ್ಕಂಡ ಶ್ರೇಣಿಯ ಮತ್ತು ಉನ್ನತ ಶ್ರೇಣಿಯ ಹಳ್ಳ/ನದಿಗಳ ಪಾತ್ರಗಳಲ್ಲಿ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಮರಳಿಗೆ 700 ರೂ.ಗಳ ಮಾರಾಟ ದರವನ್ನು ನಿಗದಿಪಡಿಸಲಾಗಿರುತ್ತದೆ.
`ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸಲು ಖನಿಜ ರಕ್ಷಣಾ ಪಡೆಗಳನ್ನು ರಚಿಸಲಾಗಿರುತ್ತದೆ. ಮೂರು ಶ್ರೇಣಿಯಲ್ಲಿ ದೊರೆಯುವ ಮರಳನ್ನು ಗ್ರಾ.ಪಂ.ಮೂಲಕ ವಿಲೇ ಪಡಿಸಲು 316 ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿರುತ್ತದೆ. 187 ಬ್ಲಾಕುಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 169 ಬ್ಲಾಕುಗಳಲ್ಲಿ ಕಾರ್ಯಾದೇಶ ನೀಡಲಾಗಿರುತ್ತದೆ. 11 ಬ್ಲಾಕುಗಳಲ್ಲಿ ಮರಳು ತೆಗೆಯಲು ಪ್ರಾರಂಭಿಸಲಾಗಿರುತ್ತದೆ. ಪ್ರಥಮ, ದ್ವಿತೀಯ, ತೃತೀಯ ಮತ್ತು ಉನ್ನತ ಶ್ರೇಣಿಯ ಹಳ್ಳಗಳ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಕೆಎಸ್‍ಎಂಸಿಎಲ್‍ಗೆ 38 ಮತ್ತು ಎಚ್‍ಜಿಎಂಎಲ್‍ಗೆ 56 ಮರಳು ಬ್ಲಾಕ್‍ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ' ಎಂದು ಅವರು ತಿಳಿಸಿದರು.
`ಅಣೆಕಟ್ಟು/ಬ್ಯಾರೆಜ್ ಹಾಗೂ ಅವುಗಳ ಹಿಂದಿನ ಪ್ರದೇಶಗಳಲ್ಲಿ ಹೂಳಿನೊಂದಿಗೆ ದೊರೆಯುವ ಮರಳನ್ನು ವಿಲೇ ಪಡಿಸಲು ಕೆಎಸ್‍ಎಂಸಿಎಲ್‍ಗೆ 7 ಮತ್ತು ಎಚ್‍ಜಿಎಂಎಲ್‍ಗೆ 4 ಪ್ರದೇಶಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಇಲಾಖೆ ಈವರೆಗೆ ಒಟ್ಟು 21 ಬ್ಲಾಕ್‍ಗಳನ್ನು ಹರಾಜು ಮೂಲಕ ವಿಲೇ ಮಾಡಿರುತ್ತದೆ. ಈ ಪೈಕಿ 18 ಕಬ್ಬಿಣದ ಅದಿರಿಗೆ ಸಂಬಂಧಿಸಿದಾಗಿದ್ದು, 3 ಸುಣ್ಣದ ಕಲ್ಲಿನ ಖನಿಜಕ್ಕೆ ಸಂಬಂಧಿಸಿದಾಗಿರುತ್ತದೆ.
`2021-22ನೆ ಸಾಲಿನಲ್ಲಿ ಈವರೆಗೆ ಒಟ್ಟು 22 ಗಣಿ ಪ್ರದೇಶಗಳನ್ನು ಹರಾಜಿಗೆ ಒಳಪಡಿಸಿದ್ದು, ಈ ಪೈಕಿ 2 ಸುಣ್ಣದ ಕಲ್ಲಿನ ಬ್ಲಾಕ್‍ಗಳನ್ನು ಯಶಸ್ವಿಯಾಗಿ ಹರಾಜು ಮೂಲಕ ವಿಲೇ ಮಾಡಲಾಗಿರುತ್ತದೆ. 5 `ಸಿ' ವರ್ಗದ ಗಣಿ ಪ್ರದೇಶಗಳು, 3 ಅವಧಿ ಮುಗಿದ ಕಬ್ಬಿಣ ಅದಿರಿನ ಗಣಿ ಗುತ್ತಿಗೆಗಳು, 4 ಸುಣ್ಣದ ಕಲ್ಲಿನ ಬ್ಲಾಕ್‍ಗಳು, 8 ಚಿನ್ನದ ಬ್ಲಾಕ್‍ಗಳು (ಸಂಯುಕ್ತ ಗಣಿ ಗುತ್ತಿಗೆಗಾಗಿ) ಉಳಿದ 20 ಬ್ಲಾಕ್‍ಗಳು ಹರಾಜು ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ' ಎಂದು ಹಾಲಪ್ಪ ಆಚಾರ್ ಮಾಹಿತಿ ನೀಡಿದರು.







