ಕೋವಿಡ್ ಲಸಿಕೆ ಪಡೆಯದ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ಮತ್ತೊಮ್ಮೆ ರದ್ದುಗೊಳಿಸಿದ ಆಸ್ಟ್ರೇಲಿಯಾ

ನೊವಾಕ್ ಜೊಕೊವಿಕ್ (AP/PTI)
ಮೆಲ್ಬೋರ್ನ್: ಕೋವಿಡ್ -19 ಲಸಿಕೆ ಪಡೆಯದೆ ದೇಶಕ್ಕೆ ಬಂದಿರುವ ಟೆನಿಸ್ ಸೂಪರ್ಸ್ಟಾರ್ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ಶುಕ್ರವಾರ ಮತ್ತೊಮ್ಮೆ ರದ್ದುಗೊಳಿಸಿದೆ. ಗಡೀಪಾರಾಗುವುದನ್ನು ತಪ್ಪಿಸಲು ಹಾಗೂ ಆಸ್ಟ್ರೇಲಿಯನ್ ಓಪನ್ನಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರು ಇನ್ನೂ ಕಾನೂನು ಸವಾಲಿನ ಆಯ್ಕೆಯನ್ನು ಹೊಂದಿದ್ದಾರೆ.
ವೀಸಾ ರದ್ದುಗೊಳಿಸುವಿಕೆಯ ಪರಿಣಾಮವಾಗಿ ಜೊಕೊವಿಕ್ಗೆ ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಹೊಸ ಆಸ್ಟ್ರೇಲಿಯನ್ ವೀಸಾ ಪಡೆಯುವುದರಿಂದ ಮೂರು ವರ್ಷಗಳವರೆಗೆ ನಿರ್ಬಂಧಿಸಲಾಗುತ್ತದೆ.
ವೀಸಾ ರದ್ದತಿ ನಿರ್ಧಾರವು 10 ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಹಾಗೂ ದಾಖಲೆಯ 21 ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಸರ್ಬಿಯಾದ ವಿಶ್ವದ ನಂಬರ್ ಒನ್ ಆಟಗಾರನ ಕನಸಿಗೆ ಭಂಗ ತಂದಿದೆ.
ಪಂದ್ಯಾವಳಿಯ ಅಗ್ರ ಶ್ರೇಯಾಂಕದ ಆಟಗಾರನಾಗಿರುವ ಜೊಕೊವಿಕ್ ಮೆಲ್ಬೋರ್ನ್ ಪಾರ್ಕ್ ಅಂಗಳದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ವಿಶ್ವದ ನಂ.1 ಆಟಗಾರ ಜೊಕೊವಿಕ್ ಕೋವಿಡ್-19 ವಿರುದ್ಧದ ಲಸಿಕೆ ಹಾಕಿಲ್ಲ ಹಾಗೂ ಅವರ ಈ ನಡೆಯು ಜನ ಸಮುದಾಯಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ಆಸ್ಟ್ರೇಲಿಯಾ ಸರಕಾರ ಜೊಕೊವಿಕ್ ಅವರ ವೀಸಾ ಕುರಿತು ಪ್ರತಿಕ್ರಿಯಿಸಿದೆ.
ವಲಸೆ ಸಚಿವ ಅಲೆಕ್ಸ್ ಹಾಕ್ ಅವರು ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಲು ವಿವೇಚನಾ ಅಧಿಕಾರವನ್ನು ಬಳಸಿದರು. "ಇಂದು ನಾನು ವಲಸೆ ಕಾಯಿದೆಯ ಸೆಕ್ಷನ್ 133C (3) ಅಡಿಯಲ್ಲಿ ಆರೋಗ್ಯ ಹಾಗೂ ಉತ್ತಮ ಸುವ್ಯವಸ್ಥೆಯ ಆಧಾರದ ಮೇಲೆ ನೊವಾಕ್ ಜೊಕೊವಿಕ್ ಹೊಂದಿದ್ದ ವೀಸಾವನ್ನು ರದ್ದುಗೊಳಿಸಲು ನನ್ನ ಅಧಿಕಾರವನ್ನು ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಬಳಸಿದ್ದೇನೆ" ಎಂದು ಹೇಳಿಕೆಯೊಂದರಲ್ಲಿ ಹಾಕ್ ಹೇಳಿದರು.