ಮಂಗಳೂರು: ಕುಖ್ಯಾತ ಆರೋಪಿ ಆಕಾಶಭವನ ಶರಣ್, ನಾಲ್ವರು ಸಹಚರರ ಬಂಧನ

ಶರಣ್ ರೋಹಿದಾಸ್ / ಚೇತನ್ ಕೊಟ್ಟಾರಿ / ಪ್ರಸಾದ್ / ಸೈನಾಲ್ ಡಿ ಸೋಜಾ / ಅನಿಲ್ ಕುಮಾರ್ ಸಾಲ್ಯಾನ್
ಮಂಗಳೂರು, ಜ.14: ಕಳೆದ ಎರಡು ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ, ದ.ಕ. ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಆರೋಪಿ ಆಕಾಶಭವನ ಶರಣ್ ರೋಹಿದಾಸ್ ಹಾಗೂ ಆತನ ಇತರ ನಾಲ್ವರು ಸಹಚರರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಆಗಿರುವ ಶರಣ್ ರೋಹಿದಾಸ್ (38) ವಿರುದ್ಧ ಮಂಗಳೂರು ನಗರ ಹಾಗೂ ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಸೇರಿ 22 ಪ್ರಕರಣಗಳು ದಾಖಲಾಗಿವೆ. ಇತರ ಬಂಧಿತ ಆರೋಪಿಗಳನ್ನು ಕಂಕನಾಡಿ ನಿವಾಸಿ ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ವೆಲ್(40), ಬಜ್ಪೆ ನಿವಾಸಿ ಸೈನಾಲ್ ಡಿ ಸೋಜಾ(22), ಪರಂಗಿಪೇಟೆ ನಿವಾಸಿ ಪ್ರಸಾದ್ (39), ಜಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ(35)ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಸೇತುವೆ ಬಳಿ ಡಿ. 8ರಂದು ರಾತ್ರಿ ಸುಮಾರು 11-30 ಗಂಟೆ ಸುಮಾರಿಗೆ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಫಿರ್ಯಾದಿದಾರರ ಬಳಿಯಿದ್ದ ಮೊಬೆಲ್, ನಗದು 3000 ರೂ. ಹಾಗೂ ದ್ವಿಚಕ್ರವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಆರೋಪಿಗಳ ಪೈಕಿ ಆಕಾಶಭವನ ಶರಣ್ ಪ್ರಮುಖ ಸೂತ್ರದಾರಿಯಾಗಿದ್ದು, ಈತನು ಇತ್ತೀಚೆಗೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡವನು ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯವನ್ನು ಎಸಗಿದ್ದಾನೆ. ಈ ಕೃತ್ಯಕ್ಕೆ ಉಪಯೋಗಿಸಿದ ಕಾರು, 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಎಂದು ಅವರು ವಿವರ ನೀಡಿದರು.
'ವಿರೋಧಿ ಬಣದ ರೌಡಿಶೀಟರ್ ಕೊಲೆಗೆ ಸಂಚು'
ಆಕಾಶಭವನ ಶರಣ್ ರೋಹಿದಾಸ್ ತನ್ನ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣದಲ್ಲಿ ಸುಲಿಗೆ ಮಾಡಿದ ಮೊಬೈಲ್ ಫೋನ್ನಿಂದ ಆಕಾಶಭವನ ಶರಣ್ ತನ್ನ ವಿರೋಧಿ ಗುಂಪಿನ ರೌಡಿಶೀಟರ್ಗೆ ಬೆದರಿಕೆ ಹಾಕಿರುವುದು ತಿಳಿದು ಬಂದಿದೆ. ವೆಷಮ್ಯದ ಜತೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿ ಸಮಾಜದಲ್ಲಿ ತನ್ನ ಮೌಲ್ಯ ಹೆಚ್ಚಿಸಿಕೊಳ್ಳಲು ಈತ ಯತ್ನಿಸುತ್ತಿರುವುದು ಸದ್ಯದ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಆರೋಪಿ ಆಕಾಶಭವನ ಶರಣ್ ವಿರುದ್ಧ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 1 ದರೋಡೆ ಮತ್ತು ಎನ್ ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. 2021 ನವೆಂಬರ್ 12ರಂದು ಈತ ಬೆಂಗಳೂರು ಪರಪ್ಪನ ಅಗ್ರಹಾರ ಜೈಲ್ನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಬಳಿಕ ಕಳೆದ ಎರಡು ತಿಂಗಳಿನಿಂದೀಚೆಗೆ ಮತ್ತೆ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಭೂಗತ ವ್ಯಕ್ತಿಗಳ ಜತೆಗೂ ಈತ ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಆರೋಪಿಗಳ ಪೈಕಿ ಅನಿಲ್ ಪಂಪ್ ವೆಲ್ ಎಂಬಾತನು ಈ ಹಿಂದೆ ಶರಣ್ ರೋಹಿದಾಸ್ ಆಕಾಶಭವನ ಜೊತೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾದ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಅಲ್ಲದೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಕ್ಬಾಲ್ ಕೊಲೆ ಪ್ರಕರಣ, ಕಂಕನಾಡಿ ನಗರ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಉದ್ಯಮಿಯೊಬ್ಬರಿಗೆ ಶೂಟೌಟ್ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಈತನ ಮೇಲೂ ಕಂಕನಾಡಿ ಠಾಣೆಯಲ್ಲಿ ರೌಡಿಶೀಟ್ ಇದೆ. ಆರೋಪಿ ಸೈನಲ್ ಡಿ ಸೋಜಾ ಎಂಬಾತನು ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಗಣೇಶ್ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿ ಅನಿಲ್ ಪಂಪ್ವೆಲ್ ಎಂಬಾತನ ಜೊತೆ ಭಾಗಿಯಾಗಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ದಿನೇಶ್ ಕುಮಾರ್, ಹರಿರಾಂ ಶಂಕರ್, ಎಸಿಪಿ ರವೀಶ್ ಮೊದಲಾದವರು ಉಪಸ್ಥಿತರಿದ್ದರು.
ರೌಡಿಶೀಟ್ನಿಂದ ನಿಶ್ಚಲಗೊಂಡಿದ್ದವನ ಮೇಲೆ ಮತ್ತೆ ರೌಡಿಶೀಟರ್!
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಿಂದ ದೂರವಾಗಿ ಸಮಾಜದಲ್ಲಿ ಉತ್ತಮ ನಡತೆಯೊಂದಿಗೆ ಜೀವನ ರೂಪಿಸಿಕೊಂಡ ಹಲವು ಮಂದಿಯನ್ನು ಇತ್ತೀಚೆಗೆ ರೌಡಿ ಶೀಟ್ನಿಂದ ನಿಶ್ಚಲಗೊಳಿಸಲಾಗಿತ್ತು. ಅದರಲ್ಲಿ ಇದೀಗ ಬಂಧಿತನಾಗಿರುವ ಆರೋಪಿ ಚೇತನ ಕೊಟ್ಟಾರಿ ಎಂಬಾತನೂ ಸೇರಿದ್ದು, ಇದೀಗ ಮತ್ತೆ ಆತನ ಮೇಲೆ ಹೊಸತಾಗಿ ರೌಡಿಶೀಟರ್ ತೆರೆಯಲಾಗಿದೆ. ಪ್ರಕರಣದ ಪ್ರಮುಖ ಹಾಗೂ ಕುಖ್ಯಾತ ಆರೋಪಿ ಶರಣ್ ರೋಹಿದಾಸ್ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿರುವುದಲ್ಲದೆ, ಹೊರ ರಾಜ್ಯಗಳಲ್ಲಿಯೂ ಈತ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದೆ. ಈತನ ಮೇಲೆ ಗೂಂಡಾಕಾಯ್ದೆ ಹೇರುವ ಬಗ್ಗೆಯೂ ಚಿಂತನೆ ಇದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
