ಉಡುಪಿಯಲ್ಲಿ ಸಂಭ್ರಮದ ಮೂರು ತೇರು ಉತ್ಸವ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆದಿರುವ ಸಪ್ತೋತ್ಸವದ ಆರನೇ ದಿನವಾದ ಶುಕ್ರವಾರ ರಾತ್ರಿ ಮಕರ ಸಂಕ್ರಾಂತಿಯ ಅಂಗವಾಗಿ ಪರ್ಯಾಯ ಅದಮಾರು ಮಠಾಧೀಶರ ನೇತೃತ್ವದಲ್ಲಿ ಆಕರ್ಷಕ ಮೂರು ತೇರು ಉತ್ಸವ ನಡೆಯಿತು.
ರಥೋತ್ಸವದಲ್ಲಿ ಅದಮಾರು ಹಿರಿಯ-ಕಿರಿಯ ಶ್ರೀಗಳಲ್ಲದೇ, ಪಲಿಮಾರು ಹಿರಿಯ-ಕಿರಿಯ, ಪೇಜಾವರ, ಶಿರೂರು, ಕಾಣಿಯೂರು ಹಾಗೂ ಸೋದೆ ಮಠಾಧೀಶರು ಭಾಗವಹಿಸಿದ್ದರು. ರಂಗುರಂಗಿನ ವಿದ್ಯುದ್ದೀಪಗಳಿಂದ ಅಲಂಕೃತ ಮಧ್ವ ಸರೋವರದಲ್ಲಿ ಶ್ರೀಕೃಷ್ಣ -ಮುಖ್ಯಪ್ರಾಣರಿಗೆ ತೆಪ್ಪೋತ್ಸವ ನಡೆಯಿತು.
ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನವೆಂದು ಹೇಳಲಾದ ಮಕರಸಂಕ್ರಮಣದಂದು ರಾತ್ರಿ ರಥಬೀದಿಯಲ್ಲಿ ಮೂರು ತೇರು ಉತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯುವುದು ಸಂಪ್ರದಾಯವಾಗಿದೆ. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರನ್ನು ತಂದು ರಥಗಳಲ್ಲಿ ಕುಳ್ಳಿರಿಸಲಾಯಿತು. ಚಿಕ್ಕ ರಥದಲ್ಲಿ ಮುಖ್ಯಪ್ರಾಣ, ಮಧ್ಯ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರವೌಳೀಶ್ವರ ಹಾಗೂ ಬ್ರಹ್ಮರಥದಲ್ಲಿ ಕೃಷ್ಣನನ್ನು ಕುಳ್ಳಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು.
ಭಕ್ತರಿಂದ ಎಳೆಯಲ್ಪಟ್ಟ ಮೂರು ರಥಗಳು ರಥಬೀದಿಯ ದಕ್ಷಿಣ ಭಾಗದಲ್ಲಿ ಪುತ್ತಿಗೆ ಮಠದ ಎದುರು ಒಂದು ಸರಳರೇಖೆಯಲ್ಲಿ ನಿಂತಾಗ ನೆರೆದ ಸಾವಿರಾರು ಮಂದಿ ಭಕ್ತರು ಜಯಘೋಷ ಮಾಡಿದರು. ಈ ಮೂರು ರಥಗಳ ಮುಂದೆ ವರ್ಣವೈವಿಧ್ಯದ ಸುಡುಮದ್ದುಗಳನ್ನು ಸಿಡಿಸಿ ಆಕಾಶದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಲಾಯಿತು.