ಅಂತರಿಕ್ಷ ಇಲಾಖೆಯ ಕಾರ್ಯದರ್ಶಿ ಮತ್ತು ಅಂತರಿಕ್ಷ ಆಯೋಗದ ಅಧ್ಯಕ್ಷರಾಗಿ ಸೋಮನಾಥ್ ಅಧಿಕಾರ ಸ್ವೀಕಾರ

ಎಸ್ ಸೋಮನಾಥ್ (Photo: Twitter/@rajeevan61)
ಬೆಂಗಳೂರು,ಜ.14: ಎಸ್.ಸೋಮನಾಥ್ ಅವರು ಶುಕ್ರವಾರ ಅಂತರಿಕ್ಷ ಇಲಾಖೆಯ ಕಾರ್ಯದರ್ಶಿ ಮತ್ತು ಅಂತರಿಕ್ಷ ಆಯೋಗದ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡರು. ಇದಕ್ಕೂ ಮುನ್ನ ಅವರು ತಿರುವನಂತಪುರದ ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಸಿ)ದಲ್ಲಿ ನಿರ್ದೇಶಕರಾಗಿ ನಾಲ್ಕು ವರ್ಷ ಕರ್ತವ್ಯ ನಿರ್ವಹಿಸಿದ್ದರು. ವಲಿಯಮಾಲಾದಲ್ಲಿರುವ ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಮ್ಸ್ ಸೆಂಟರ್ನ ನಿರ್ದೇಶಕರಾಗಿಯೂ ಎರಡೂವರೆ ವರ್ಷ ಕಾರ್ಯ ನಿರ್ವಹಿಸಿದ್ದಾರೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಸೋಮನಾಥ್ ಕೊಲ್ಲಂನ ಟಿಕೆಎಂ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎರೋಸ್ಪೇಸ್ ಇಂಜಿನಿಯರಿಂಗ್ನಲ್ಲಿ ಮಾಸ್ಟರ್ಸ್ ಪದವಿಗಳನ್ನು ಗಳಿಸಿದ್ದಾರೆ.
1985ರಲ್ಲಿ ವಿಎಸ್ಎಸ್ಸಿ ಸೇರಿದ್ದ ಅವರು ಆರಂಭಿಕ ಹಂತಗಳಲ್ಲಿ ಪಿಎಸ್ಎಲ್ವಿಯ ಸಮನ್ವಯಕ್ಕಾಗಿ ಟೀಮ್ ಲೀಡರ್ ಆಗಿದ್ದರು. ಅವರು ಉಡಾವಣಾ ವಾಹನಗಳ ಸಿಸ್ಟಮ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ.
ಆ್ಯಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ‘ಸ್ಪೇಸ್ ಗೋಲ್ಡ್ ಮೆಡಲ್’, ಇಸ್ರೋದಿಂದ ‘ಮೆರಿಟ್ ಆವಾರ್ಡ್’ ಮತ್ತು ‘ಸಾಧನಾ ಶ್ರೇಷ್ಠ ಪ್ರಶಸ್ತಿ’ ಹಾಗೂ ಜಿಎಸ್ಎಲ್ವಿ ಎಮ್ಕೆ-III ಅಭಿವೃದ್ಧಿಗಾಗಿ ‘ಟೀಮ್ ಎಕ್ಸ್ಲೆನ್ಸ್ ಆವಾರ್ಡ್ ’ಗಳಿಗೆ ಅವರು ಭಾಜನರಾಗಿದ್ದಾರೆ. ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಮತ್ತು ಎರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾಗಳ ಫೆಲೊ ಆಗಿರುವ ಅವರು ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಆ್ಯಸ್ಟ್ರೋನಾಟಿಕ್ಸ್ ನ ಕರಸ್ಪಾಂಡಿಗ್ ಮೆಂಬರ್ ಕೂಡ ಆಗಿದ್ದಾರೆ.