ಬೈಲಕೆರೆ ವನಿತಾ ರೋಡಿಗ್ರಸ್ ಸಾವಿನ ಪ್ರಕರಣ: ತನಿಖೆಗೆ ಆಗ್ರಹಿಸಿ ಮನವಿ
ಮಲ್ಪೆ, ಜ.14: ಬೈಲಕೆರೆ ನಿವಾಸಿ ವನಿತಾ ರೋಡ್ರಿಗಸ್ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮಲ್ಪೆ ಪೊಲೀಸ್ ಠಾಣೆಗೆ ಇಂದು ಮನವಿ ಸಲ್ಲಿಸಿದರು.
ವನಿತಾ ರೊಡ್ರಿಗಸ್ ಡಿ.28ರಂದು ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಡಿ.31 ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈಗಾಗಲೇ ಕೌಟುಂಬಿಕ ಹಿಂಸೆಗೆ ಒಳಗಾಗಿದ್ದ ಈಕೆ, ಈ ಹಿಂದೆ ಠಾಣೆಗೆ ದೂರು ನೀಡಿದ್ದರು. ವನಿತಾ ತಲೆಗೆ ಬಿದ್ದ ಹೊಡೆತದಿಂದ ಗಾಯಗೊಂಡು ಮೃತಪಟ್ಟಿರುವ ಬಗ್ಗೆ ಶಂಕೆ ಇದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಕುರಿತು ಬೈಲಕೆರೆ ಯುವಕ ಮಂಡಲ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು ಆಯೋಗವು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಆದುದರಿಂದ ಸಂಶಯಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಶರತ್ ಕುಮಾರ್ ಬೈಲಕೆರೆ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಅರುಣ್ ಜತ್ತನ್ನ, ತೆಂಕನಿಡಿಯೂರು ಸಂಜೀವಿನಿ ಸಂಘದ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಹಾಗೂ ಸಂಘದ ಸದಸ್ಯರು, ಬೈಲಕೆರೆ ಅಂಗನವಾಡಿ ಶಿಕ್ಷಕಿ ಸುನೀತ ಹಾಗೂ ಆಶಾ ಕಾರ್ಯಕರ್ತೆ ಯರು ಉಪಸ್ಥಿತರಿದ್ದರು.