ಆಸ್ಟ್ರೇಲಿಯಾದಲ್ಲಿ ಮತ್ತೆ ಜೋಕೊವಿಕ್ ಬಂಧನ

ಮೆಲ್ಬೋರ್ನ್: ವಿಶ್ವದ ಖ್ಯಾತ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರನ್ನು ಆಸ್ಟ್ರೇಲಿಯಾದಲ್ಲಿ ಶನಿವಾರ ಮತ್ತೆ ಬಂಧಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಈ ಟೆನಿಸ್ ಸೂಪರ್‌ಸ್ಟಾರ್ ಸಾರ್ವಜನಿಕರಿಗೆ ಅಪಾಯ ಎಂದು ಘೋಷಿಸಿದ್ದು, ಅವರ ವೀಸಾವನ್ನು ಎರಡನೇ ಬಾರಿ ಅಧಿಕಾರಿಗಳು ರದ್ದುಪಡಿಸಿದ್ದಾರೆ.
ಮೆಲ್ಬೋರ್ನ್‌ನಲ್ಲಿರುವ ಒಂದು ಜಾಗದಲ್ಲಿ 34 ವರ್ಷದ ಈ ಸೈಬೀರಿಯಾ ಆಟಗಾರನನ್ನು ಬಂಧನದಲ್ಲಿ ಇಟ್ಟಿರುವುದಾಗಿ ಗಡೀಪಾರು ವಿರುದ್ಧದ ಮನವಿಯ ವಿಚಾರಣೆ ವೇಳೆ ಕೋರ್ಟ್ ದಾಖಲೆಗಳಿಂದ ತಿಳಿದು ಬಂದಿದೆ.
ನ್ಯಾಯಾಲಯದಲ್ಲಿ ಪ್ರತ್ಯೇಕ ಹೇಳಿಕೆ ಸಲ್ಲಿಸಿರುವ ಆಸ್ಟ್ರೇಲಿಯಾ ಅಧಿಕಾರಿಗಳು, "ಜೊಕೊವಿಕ್ ಅವರು ದೇಶದಲ್ಲಿ ಇದ್ದರೆ, ಇದು ಲಸಿಕೆ ವಿರೋಧಿ ಮನೋಭಾವವನ್ನು ಪ್ರಚೋದಿಸಿದಂತಾಗುತ್ತದೆ" ಎಂದು ವಾದಿಸಿದ್ದಾರೆ. ತಕ್ಷಣ ಅವರನ್ನು ಗಡೀಪಾರು ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ.
ದಾಖಲೆಯ 21ನೇ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಜೊಕೊವಿಕ್ ಕನಸಿಗೆ ಇದರಿಂದ ಬಲವಾದ ಏಟು ಬಿದ್ದಂತಾಗಿದೆ. ಸೋಮವಾರದಿಂದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಆರಂಭವಾಗಲಿದೆ. ಬಂಧನದ ವಿರುದ್ಧ ಜೊಕೊವಿಕ್ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಆಸ್ಟ್ರೇಲಿಯಾದ ಫೆಡರಲ್ ಕೋರ್ಟ್ ಬೆಳಿಗ್ಗೆ 10.15ಕ್ಕೆ ವಿಚಾರಣೆ ನಡೆಸಲಿದೆ.