ಹೆಬ್ರಿ: ಕ್ಷುಲ್ಲಕ ಕಾರಣಕ್ಕಾಗಿ ತಮ್ಮನನ್ನೇ ಕೊಲೆಗೈದು ಬಾವಿಗೆ ಎಸೆದ ಅಣ್ಣ?
ಸಹೋದರನಿಂದ ಶಂಕಿಸಿ ದೂರು: ಆರೋಪಿ ಬಂಧನ

ಸಾಂದರ್ಭಿಕ ಚಿತ್ರ
ಹೆಬ್ರಿ, ಜ.15: ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೋರ್ವ ತನ್ನ ತಮ್ಮನನ್ನೇ ಹೊಡೆದು ಬಾವಿಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಇನ್ನೋರ್ವ ಸಹೋದರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದವರನ್ನು ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆಯ ನಿವಾಸಿ ರವಿರಾಜ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಮೃತರ ಅಣ್ಣ ಶಂಕರನಾರಾ ಯಣ ಶೆಟ್ಟಿಗಾರ್(44) ಬಂಧಿತ ಆರೋಪಿ. ಈತನನ್ನು ಪೊಲೀಸರು ಇಂದು ಸಂಜೆ ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಜ.13ರ ಬೆಳಗ್ಗೆ 8ಗಂಟೆಯಿಂದ ಜ.14ರ ಬೆಳಗ್ಗೆ 9ಗಂಟೆಯ ಮಧ್ಯಾವಧಿ ಯಲ್ಲಿ ರವಿರಾಜ ಶೆಟ್ಟಿಗಾರ್ ಮನೆಯ ಹತ್ತಿರದ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಪರಿಶೀಲಿಸಿದಾಗ ಮೃತರ ತಲೆಯ ಹಿಂಬದಿ ರಕ್ತಗಾಯ ಆಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೃತರ ಮರಣದಲ್ಲಿ ಸಂಶಯ ಇರುವುದಾಗಿ ಆರೋಪಿಸಿ ಅವರ ಸಹೋದರ ಪರ್ಕಳ 80 ಬಡಗುಬೆಟ್ಟು ಕೆಳಕಬ್ಯಾಡಿ ನಿವಾಸಿ ಜಯರಾಮ ಶೆಟ್ಟಿಗಾ್ ಹೆಬ್ರಿ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮೃತರ ತಲೆಯ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯಧದಿಂದ ಬಲವಾಗಿ ಕಡಿದು ಗಾಯಗಳಾಗಿುವುದು ಕಂಡುಬಂದಿತ್ತು.
ಶಂಕರನಾರಾಯಣ ಶೆಟ್ಟಿಗಾರ್ ಮನೆಯ ಬಳಿ ಇರುವ ಕೋಣೆಯ ಮಾಡನ್ನು ರವಿರಾಜ್ ಅವರಿಗೆ ಹೇಳದೆ ಕಿತ್ತು ಹಾಕಿದ್ದರು. ಈ ವಿಚಾರದಲ್ಲಿ ಶಂಕರನಾರಾಯಣ ಹಾಗೂ ರವಿರಾಜ್ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದೇ ಕಾರಣಕ್ಕಾಗಿ ಶಂಕರನಾರಾಯಣ ಶೆಟ್ಟಿಗಾರ್, ತನ್ನ ತಮ್ಮ ರವಿರಾಜ ಶೆಟ್ಟಿಗಾರ್ರ ತಲೆಗೆ ಒಡೆದು ಕೊಲೆ ಮಾಡಿ ಬಳಿಕ ಮನೆ ಸಮೀಪದ ಬಾವಿಗೆ ಎಸೆದಿದ್ದರೆಂದು ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.